ಮುಂಗಾರು ಅಧಿವೇಶನ : ಅನಂತ್ ಕುಮಾರ್ ಹೆಗ್ಡೆ ಸೇರಿದಂತೆ 17 ಸಂಸದರಿಗೆ ಕೊರೋನಾ ಸೋಂಕು
ಹೊಸದಿಲ್ಲಿ, ಸೆಪ್ಟೆಂಬರ್14: ಮುಂಗಾರು ಅಧಿವೇಶನದಲ್ಲಿ ಪಾಲ್ಗೊಳ್ಳುವ ಸಂಸದರನ್ನು ಕೊರೋನವೈರಸ್ ಸೋಂಕಿನ ಪರೀಕ್ಷೆಗೆ ಒಳಪಡಿಸಿದಾಗ ಮೀನಾಕ್ಷಿ ಲೇಖಿ, ಅನಂತ್ ಕುಮಾರ್ ಹೆಗ್ಡೆ, ಪರ್ವೇಶ್ ಸಾಹಿಬ್ ಸಿಂಗ್ ಸೇರಿದಂತೆ 17 ಸಂಸದರಲ್ಲಿ ಕೋವಿಡ್-19 ಸೋಂಕು ದೃಢಪಟ್ಟಿದೆ.
ಅಧಿವೇಶನದಲ್ಲಿ ಪಾಲ್ಗೊಳ್ಳುವ ಸಂಸದರಿಗೆ ಕೊರೋನಾ ಸೋಂಕಿನ ಪರೀಕ್ಷೆ ಕಡ್ಡಾಯವಾಗಿತ್ತು. ಈ ಹಿನ್ನೆಲೆಯಲ್ಲಿ ಸಂಸದರನ್ನು ಪರೀಕ್ಷೆಗೆ ಒಳಪಡಿಸಿದಾಗ ಮೀನಾಕ್ಷಿ ಲೇಖಿ, ಅನಂತ್ ಕುಮಾರ್ ಹೆಗ್ಡೆ ಮತ್ತು ಪರ್ವೇಶ್ ಸಾಹಿಬ್ ಸಿಂಗ್ ಸೇರಿದಂತೆ 17 ಸಂಸದರಿಗೆ ಕೊರೋನಾ ಸೋಂಕು ತಗುಲಿರುವುದು ಪತ್ತೆಯಾಗಿದೆ.
ಇಂದು ಬೆಳಿಗ್ಗೆ ಮಾನ್ಸೂನ್ ಅಧಿವೇಶನಕ್ಕೆ ಮುಂಚಿತವಾಗಿ ಕಡ್ಡಾಯ ಪರೀಕ್ಷೆಗಳನ್ನು ನಡೆಸಲಾಗಿದ್ದು, ಲೋಕಸಭಾ ಸದಸ್ಯರನ್ನು ಸೆಪ್ಟೆಂಬರ್ 13 ಮತ್ತು ಸೆಪ್ಟೆಂಬರ್ 14 ರಂದು ಸಂಸತ್ ಭವನದಲ್ಲಿ ಪರೀಕ್ಷಿಸಲಾಯಿತು.
ಏತನ್ಮಧ್ಯೆ, ಭಾರತವು 24 ಗಂಟೆಗಳಲ್ಲಿ 92,070 ಕೊರೊನಾವೈರಸ್ ಪ್ರಕರಣಗಳನ್ನು ದಾಖಲಿಸಿದೆ. ಈ ಮೂಲಕ ಒಟ್ಟು ಸೋಂಕುಗಳ ಸಂಖ್ಯೆ 48 ಲಕ್ಷಕ್ಕೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ. ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 1,136 ಮಂದಿ ಕೊರೋನಾಗೆ ಬಲಿಯಾಗಿದ್ದು, ಒಟ್ಟು ಸಂಖ್ಯೆ 79,722 ಕ್ಕೆ ತಲುಪಿದೆ. 9,86,598 ಸಕ್ರಿಯ ಪ್ರಕರಣಗಳು ಸೇರಿದಂತೆ ಒಟ್ಟು ಪ್ರಕರಣಗಳು 4,846,427 ಆಗಿದ್ದರೆ, 37,80,107 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ.