ಶಾರ್ಜಾ ಕ್ರೀಡಾಂಗಣವನ್ನು ಪರಿಶೀಲನೆ ನಡೆಸಿದ ಬಿಸಿಸಿಐ ಬಾಸ್ ಸೌರವ್ ಗಂಗೂಲಿ
ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರು ಯುಎಇ ಐಪಿಎಲ್ ಟೂರ್ನಿಯನ್ನು ಯಶಸ್ವಿಯಾಗಿ ಸಂಘಟಿಸಲು ಮುಂದಾಗಿದ್ದಾರೆ. ಟೂರ್ನಿಗೆ ಯಾವುದೇ ರೀತಿಯ ತೊಂದರೆಯಾಗಬಾರದು ಅನ್ನೋ ನಿಟ್ಟಿನಲ್ಲಿ ಕಾಯೋನ್ಮುಖರಾಗಿದ್ದಾರೆ. ಯುಎಇ ನಲ್ಲಿ ಸೆಪ್ಟಂಬರ್ 19ರಿಂದ ನವೆಂಬರ್ 10ರವರೆಗೆ ನಡೆಯಲಿರುವ ಟೂರ್ನಿಗೆ ಈಗಾಗಲೇ ಎಂಟೂ ಫ್ರಾಂಚೈಸಿಗಳು ಯುಎಇನಲ್ಲಿ ಬೀಡು ಬಿಟ್ಟಿವೆ. ಅಲ್ಲದೆ ಕಠಿಣ ಅಭ್ಯಾಸದಲ್ಲೂ ನಿರತವಾಗಿವೆ.
ಯುಎಇ ನ ಮೂರು ಮೈದಾನಗಳಲ್ಲಿ ನಡೆಯಲಿರುವ ಟೂರ್ನಿಯ ಸಿದ್ಧತೆಗಳ ಬಗ್ಗೆ ಬಿಸಿಸಿಐ ಬಾಸ್ ಪರಿಶೀಲನೆ ನಡೆಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಸೌರವ್ ಗಂಗೂಲಿ ಅವರು ಶಾರ್ಜಾ ಕ್ರೀಡಾಂಗಣಕ್ಕೆ ಭೇಟಿ ಕೊಟ್ಟಿದ್ದಾರೆ. ಅಲ್ಲದೆ ನವೀಕರಣಗೊಂಡಿರುವ ಶಾರ್ಜಾ ಮೈದಾನದ ಬಗ್ಗೆ ಸೌರವ್ ಗಂಗೂಲಿ ಮೆಚ್ಚುಗೆ ಕೂಡ ವ್ಯಕ್ತಪಡಿಸಿದ್ದಾರೆ.
ಶಾರ್ಜಾ ಕ್ರೀಡಾಂಗಣ ಅಂದ ಕ್ಷಣ ನೆನಪಾಗೋದೇ ಸಚಿನ್ ತೆಂಡುಲ್ಕರ್. ಆಸ್ಟ್ರೇಲಿಯದ ವೇಗದೂತರಿಗೆ ಮತ್ತು ಸ್ಪಿನ್ ಮಾಂತ್ರಿಕರ ಚಳಿ ಬಿಡಿಸಿದ್ದ ಸಚಿನ್ ತೆಂಡುಲ್ಕರ್ ಅವರ ಬ್ಯಾಟಿಂಗ್ ವೈಭವ ಹಾಗೇ ಒಂದು ಕ್ಷಣ ಕಣ್ಣ ಮುಂದೆ ಹಾದು ಹೋಗುತ್ತದೆ. ಅಂತಹ ಶಾರ್ಜಾ ಮೈದಾನ ಇದೀಗ ಹೊಸ ಲುಕ್ ನಲ್ಲಿ ನವೀಕರನಗೊಂಡಿದೆ. ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸಿಕೊಂಡು ಈ ಬಾರಿಯ ಐಪಿಎಲ್ ಟೂರ್ನಿಯನ್ನು ಆಡಿಸಲಾಗುತ್ತಿದೆ. ಶಾರ್ಜಾ ಕ್ರೀಡಾಂಗಣಕ್ಕೆ ಭೇಟಿ ಕೊಟ್ಟ ಗಂಗೂಲಿ ಜೊತೆ ಐಪಿಎಲ್ ಮುಖ್ಯಸ್ಥ ಬ್ರಿಜೇಶ್ ಪಟೇಲ್, ಮಾಜಿ ಐಪಿಎಲ್ ಮುಖ್ಯಸ್ಥ ರಾಜೀವ್ ಶುಕ್ಲಾ, ಐಪಿಎಲ್ ಸಿಇಒ ಹೇಮಾಂಗ್ ಅಮೀನ್ ಮೊದಲಾದವರು ಇದ್ರು. ಶಾರ್ಜಾ ಮೈದಾನದಲ್ಲಿ ಐಪಿಎಲ್ ಟೂರ್ನಿಯ ಒಟ್ಟು 12 ಪಂದ್ಯಗಳು ನಡೆಯಲಿವೆ.
ಭಾರತದ ಖ್ಯಾತ ಕ್ರಿಕೆಟ್ ತಾರೆಗಳಾದ ಸುನೀಲ್ ಗವಾಸ್ಕರ್ ಮತ್ತು ಸಚಿನ್ ತೆಂಡುಲ್ಕರ್ ಶಾರ್ಜಾ ಕ್ರೀಡಾಂಗಣದಲ್ಲಿ ಅದ್ಭುತವಾದ ಆಟಗಳನ್ನು ಪ್ರದರ್ಶಿಸಿದ್ರು. ಇದೀಗ ಅದೇ ಮೈದಾನದಲ್ಲಿ ಐಪಿಎಲ್ ಆಟಗಾರರು ಆಡುತ್ತಿದ್ದಾರೆ ಎಂದು ಗಂಗೂಲಿ ಈ ಸಂದರ್ಭದಲ್ಲಿ ಹೇಳಿದ್ರು.
1984ರಲ್ಲಿ ಶಾರ್ಜಾ ಕ್ರೀಡಾಂಗಣದಲ್ಲಿ ಮೊದಲ ಏಕದಿನ ಪಂದ್ಯ ನಡೆದಿತ್ತು. ನಂತರ ಇಲ್ಲಿ 240ಕ್ಕೂ ಅಧಿಕ ಪಂದ್ಯಗಳು ನಡೆದಿವೆ. ಸೌರವ್ ಗಂಗೂಲಿ 1998ರಲ್ಲಿ ನ್ಯೂಜಿಲೆಂಡ್ ವಿರುದ್ಧ ಇದೇ ಮೈದಾನದಲ್ಲಿ ಶತಕ ಕೂಡ ದಾಖಲಿಸಿದ್ರು.