ಮೈಸೂರು: ಸೆ.21ರಿಂದ ರಾಜ್ಯದಲ್ಲಿ ಶಾಲೆಗಳು ಆರಂಭವಾಗಲಿವೆ ಎಂಬ ಊಹಾಪೋಹಗಳಿಗೆ ಬ್ರೇಕ್ ಹಾಕಿರುವ ಶಿಕ್ಷಣ ಸಚಿವ ಸುರೇಶ್‍ಕುಮಾರ್, ಸೆ.21ರಿಂದ ಶಾಲೆಗಳು ಪ್ರಾರಂಭವಾಗಲಿವೆ. ಆದರೆ, ತರಗತಿಗಳು ಪ್ರಾರಂಭವಾಗುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಅವರು, ಸೆ.30ರೊಳಗೆ 1ರಿಂದ 10ನೇ ತರಗತಿ ವಿದ್ಯಾರ್ಥಿಗಳ ದಾಖಲಾತಿ ಪ್ರಕ್ರಿಯೆ ಮುಗಿಯಬೇಕು. ಕೇಂದ್ರ ಸರ್ಕಾರದಿಂದ ಗ್ರೀನ್ ಸಿಗ್ನಲ್ ಬರುವವರೆಗೆ ತರಗತಿಗಳ ಆರಂಭ ಇಲ್ಲ ಎಂದು ತಿಳಿಸಿದ್ದಾರೆ.
ಶಾಲೆಗಳು ಯಾವಾಗ ಪ್ರಾರಂಭವಾಗುತ್ತವೆ ಎಂದು ಹೋದಲ್ಲೆಲ್ಲಾ ಮಕ್ಕಳು ಕೇಳುತ್ತಿದ್ದಾರೆ. ಪೋಷಕರೂ ಕೂಡ ಗೊಂದಲದಲ್ಲಿದ್ದು, ಆತಂಕ ನಿವಾರಿಸುವ ಕೆಲಸವನ್ನು ಶಿಕ್ಷಣ ಇಲಾಖೆ ಮಾಡಲಿದೆ ಎಂದಿದ್ದಾರೆ.
ಕೇವಲ ಒಂದು ಅವಧಿಯ ಶುಲ್ಕವನ್ನು ಮಾತ್ರ ಖಾಸಗಿ ಶಾಲೆಗಳು ಪಡೆಯಬೇಕು. ಒಂದು ವೇಳೆ ಶಾಲೆಗಳು ಹೆಚ್ಚಿನ ಶುಲ್ಕಕ್ಕೆ ಡಿಮ್ಯಾಂಡ್ ಮಾಡಿದರೆ ಡಿಡಿಪಿಇ ಹಾಗೂ ಬಿಇಒ ಗಮನಕ್ಕೆ ತಂದರೆ ಕ್ರಮಕೈಗೊಳ್ಳುತ್ತಾರೆ. ಯಾವುದೇ ಪೋಷಕರಿಗೆ ಸಮಸ್ಯೆ ಆದರೆ ಬಿಇಒ ಸಂಪರ್ಕಿಸಿ ಎಂದು ಸಚಿವರು ಸಲಹೆ ನೀಡಿದ್ದಾರೆ.
ಖಾಸಗಿ ಶಾಲೆಗಳಿಂದ ಸರ್ಕಾರಿ ಶಾಲೆಗಳತ್ತ ಮಕ್ಕಳ ವರ್ಗಾವಣೆ ಹೆಚ್ಚಿರುವುದು ಸಕಾರಾತ್ಮಕ ಬೆಳವಣಿಗೆ. ಎಷ್ಟೇ ಮಕ್ಕಳು ಬಂದರು ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಅಡ್ಮಿಷನ್ ಮಾಡಿಕೊಳ್ಳಲಾಗುವುದು. ಶಾಸಗಿ ಶಾಲೆಗಳು ಟಿ.ಸಿ ಕೊಡದಿದ್ರೆ ಬಿಇಒ ಮೂಲಕ ಟಿಸಿ ಕೊಡಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಸುರೇಶ್‍ಕುಮಾರ್ ಮಾಹಿತಿ ನೀಡಿದ್ದಾರೆ.