ನವದೆಹಲಿ: ಕೊರೋನಾ ವೈರಸ್ ಕುರಿತು ಅನಗತ್ಯ ಭಯ ಬೇಡ.. ಅಗತ್ಯ ಮುಂಜಾಗ್ರತೆ ವಹಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ಜನರಿಗೆ ಸಲಹೆ ನೀಡಿದ್ದು, ಕೇಂದ್ರ ಸಚಿವರ ವಿದೇಶ ಪ್ರವಾಸಕ್ಕೆ ನಿರ್ಬಂಧ ಹೇರಿದ್ದಾರೆ. ವಿಶ್ವದಾದ್ಯಂತ 30ಕ್ಕೂ ಹೆಚ್ಚು ದೇಶಗಳನ್ನು ಕೊರೊನಾ ಭಾದಿಸುತ್ತಿದ್ದು, ಭಾರತದಲ್ಲಿ ಸೋಂಕಿತರ ಸಂಖ್ಯೆ 73ಕ್ಕೆ ಏರಿಕೆಯಾಗಿದೆ. ಈ ಹಿನ್ನೆಲೆ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ ಕೊರೋನಾ ವೈರಸ್ ಕುರಿತು ಅನಗತ್ಯ ಭಯ ಬೇಡ.. ಮುಂಜಾಗ್ರತೆ ವಹಿಸಿ ಸೋಂಕಿನಿಂದ ದೂರ ಉಳಿಯಿರಿ ಎಂದು ಸಲಹೆ ನೀಡಿದ್ದಾರೆ.
ಅಲ್ಲದೆ ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ‘ವದಂತಿಗಳನ್ನು ನಂಬಬೇಡಿ. ಕೊರೊನಾ ವಿರುದ್ಧ ಹೋರಾಡಲು ನಮ್ಮ ಸರ್ಕಾರ ಸಂಪೂರ್ಣ ಸನ್ನದ್ಧವಾಗಿದೆ. ಅಂತೆಯೇ ಮುಂಜಾಗ್ರತಾ ಕ್ರಮವಾಗಿ ಕೇಂದ್ರ ಸರ್ಕಾರದ ಎಲ್ಲಾ ಸಚಿವರುಗಳ ಹಾಗೂ ಅಧಿಕಾರಿಗಳ ವಿದೇಶ ಪ್ರವಾಸವನ್ನು ರದ್ದುಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ. 
ಅಲ್ಲದೇ ವಿದೇಶ ಪ್ರವಾಸವನ್ನು ರದ್ದುಗೊಳಿಸುವಂತೆ ಜನರಲ್ಲೂ ಮನವಿ ಮಾಡಿರುವ ಪ್ರಧಾನಿ ಮೋದಿ, ಕೊರೊನಾದಿಂದ ಕಟುಂಬವನ್ನು ರಕ್ಷಿಸಿಕೊಳ್ಳುವ ಹೊಣೆ ಎಲ್ಲರ ಮೇಲಿದೆ ಎಂದು ಟ್ವೀಟ್ ಮಾಡಿದ್ದಾರೆ.








