ಚಿಂತಾಮಣಿ : ಎಂಟಿಬಿ ನಾಗರಾಜ್, ಆರ್ ಶಂಕರ್ ಬಿಜೆಪಿ ಅಧಿಕಾರಕ್ಕೆ ಬರೋದಕ್ಕೆ ತಮ್ಮ ಸಚಿವ ಸ್ಥಾನ ತ್ಯಾಗ ಮಾಡಿದ್ದಾರೆ. ಹೀಗಾಗಿ ಅವರನ್ನು ಮಂತ್ರಿ ಮಾಡಲೇಬೇಕೆಂದು ಕೃಷಿ ಸಚಿವ ಬಿ.ಸಿ ಪಾಟೀಲ್ ಹೇಳಿದ್ದಾರೆ.
ಚಿಂತಾಮಣಿಯಲ್ಲಿ ಸುದ್ದಿಗಾರರೊಂದಿಗೆ ಸಂಪುಟ ವಿಸ್ತರಣೆ ಬಗ್ಗೆ ಮಾತನಾಡಿದ ಸಚಿವರು, ಯಡಿಯೂರಪ್ಪ ನುಡಿದಂತೆ ನಡೆದುಕೊಳ್ತಾರೆ. ಬಿಜೆಪಿ ಅಧಿಕಾರಕ್ಕೆ ಬರಲು ಕಾರಣರಾದ ಎಲ್ಲರಿಗೂ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ. ಅದರಂತೆ ಎಂಟಿಬಿ ನಾಗರಾಜ್ ಹಾಗೂ ಆರ್. ಶಂಕರ್ ಅವರನ್ನು ಅಧಿವೇಶನ ಮುಗಿದ ಬಳಿಕ ಸಂಪುಟ ಸೇರಲಿದ್ದಾರೆ ಎಂದು ತಿಳಿಸಿದರು.
ಇದೇ ವೇಳೆ ಸಿಎಂ ಬದಲಾವಣೆ ಬಗ್ಗೆ ಮಾತನಾಡಿದ ಅವರು, ಮುಖ್ಯಮಂತ್ರಿಗಳು ದೆಹಲಿಗೆ ಆರು ತಿಂಗಳಿಂದ ಹೋಗಿರಲಿಲ್ಲ. ಲಾಕ್‍ಡೌನ್ ಬಳಿಕ ಮೊದಲ ಬಾರಿಗೆ ಹೋಗಿದ್ದಾರೆ. ಯಡಿಯೂರಪ್ಪ ದೆಹಲಿ ಪ್ರವಾಸಕ್ಕೆ ಹೊಸ ಅರ್ಥ ಕಲ್ಪಿಸುವ ಅವಶ್ಯಕತೆ ಇಲ್ಲ. ನೆರೆ, ಅನುದಾನ, ಜಿಎಸ್ ಟಿ ವಿಚಾರ ಹಾಗೂ ರಾಜ್ಯದ ಅಭಿವೃದ್ಧಿ ಬಗ್ಗೆ ಕೇಂದ್ರ ಸಚಿವರುಗಳ ಭೇಟಿಗೆ ತೆರಳಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಇನ್ನು ಡ್ರಗ್ ವಿಚಾರವಾಗಿ ಮಾತನಾಡಿ, ಡ್ರಗ್ಸ್ ಅನ್ನೋದು ಎಲ್ಲಾ ರಂಗದಲ್ಲೂ ಇದೆ. ಸಿನಿಮಾ ರಂಗದಲ್ಲಿ ಮಾತ್ರ ಇಲ್ಲ. ಸಿನಿಮಾದವರು, ಸಿನಿರಂಗ ಅನ್ನೋದು ಗಾಜಿನ ಮನೆ ಇದ್ದಂತೆ. ಅದಕ್ಕೆ ಅವರನ್ನು ಹಿಡಿದು ಬಿಟ್ರು. ಆದರೆ, ರಾಜಕೀಯ, ವ್ಯಾಪಾರಸ್ಥರು, ಅಧಿಕಾರಿ ವರ್ಗ, ಐಟಿ-ಬಿಟಿಯಲ್ಲೂ ಇದೆ. ರಾಗಿಣಿ ಆರೋಪಿ ನಂಬರ್ 2, ಆರೋಪಿ ನಂಬರ್ 1 ತೋರಿಸ್ತಾನೆ ಇಲ್ಲ. ಬರೀ ರಾಗಿಣಿ, ಸಂಜನಾ ಮಾತ್ರ ತೋರಿಸ್ತೀರಾ, ಉಳಿದೋರನ್ನ ತೋರಿಸ್ತಿಲ್ಲ. ಸಮಾಜ ಹುಟ್ಟಿದಾಗಿನಿಂದ ದಾಸ್ಯಗಳು ಇವೆ. ಅದಕ್ಕೆ ಬ್ರೇಕ್ ಹಾಕೋ ಕೆಲಸ ನಮ್ಮ ಸರ್ಕಾರ ಮಾಡ್ತಿದೆ ಎಂದು ಹೇಳಿಕೆ ನೀಡಿದ್ದಾರೆ.








