ಚೆನ್ನೈ: ಸೂಪರ್‌ಸ್ಟಾರ್ ರಜಿನಿಕಾಂತ್ ಇವತ್ತು ತಮ್ಮ ಹೊಸ ರಾಜಕೀಯ ಪಕ್ಷವನ್ನು ಘೋಷಣೆ ಮಾಡ್ತಾರೆ ಎಂದು ಹೇಳಲಾಗಿತ್ತು. ಆದ್ರೆ ರಜನಿ ಪಕ್ಷದ ಹೆಸರನ್ನು ಘೋಷಣೆ ಮಾಡದೆ ತಮ್ಮ ರಾಜಕೀಯ ಐಡಿಯಾಲಜಿಗಳನ್ನ ಜನತೆಯ ಜೊತೆ ಹಂಚಿಕೊಂಡಿದ್ದಾರೆ. ರಾಜಕೀಯದಲ್ಲಿ ಹೊಸ ಆಂದೋಲನ ನಡೀಬೇಕು ಎಂದು ಜನರಿಗೆ ಕರೆ ಕೊಟ್ಟಿದ್ದಾರೆ ತಲೈವಾ. 2017ರ ಡಿಸೆಂಬರ್‌ನಲ್ಲೇ ರಾಜಕೀಯ ಪ್ರವೇಶಿಸುವ ಹಾಗೂ ಪಕ್ಷ ಕಟ್ಟುವ ನಿರ್ಧಾರ ಪ್ರಕಟಿಸಿದ್ದ ರಜನೀಕಾಂತ್ ಇಂದು ಸುದ್ದಿಗೋಷ್ಟಿ ನಡೆಸಿ ತಮ್ಮ ಮುಂದಿನ ರಾಜಕೀಯ ನಡೆಯ ಕುರಿತು ಮಾತನಾಡಿದರು.
“ನಾನು ಮುಖ್ಯಮಂತ್ರಿಯಾಗಲ್ಲ”
ನಾನು ಮುಖ್ಯಮಂತ್ರಿಯಾಗಲ್ಲ, ಪಕ್ಷದ ಮುಖ್ಯಸ್ಥನಾಗಿಯೇ ಇರುತ್ತೇನೆ. ಪಕ್ಷದಿಂದಲೇ ಸಮರ್ಥ ನಾಯಕನೊಬ್ಬ ಮುಖ್ಯಮಂತ್ರಿಯಾಗ್ತಾನೆ. ನಾನು ಎಲ್ಲೇ ಹೋದ್ರೂ ಸಿಎಂ ಸಿಎಂ ಅಂತ ಕೂಗೋದನ್ನ ನಿಲ್ಲಿಸಿ. ಪಕ್ಷದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯುವಕರೇ ಇರಬೇಕು. ಅವರಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿ ಸುಶಿಕ್ಷಿತ ಮತ್ತು ಸಹಾನುಭೂತಿಯುಳ್ಳ ಯುವ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಕನಸನ್ನು ಬಿಚ್ಚಿಟ್ಟರು. ನಾನು ಯಾವತ್ತಿಗೂ ಮುಖ್ಯಮಂತ್ರಿ ಸ್ಥಾನದ ಬಗ್ಗೆ ಯೋಚಿಸಿಲ್ಲ. ರಾಜಕೀಯದಲ್ಲಿ ಬದಲಾವಣೆ ತರುವುದನ್ನಷ್ಟೇ ಬಯಸುತ್ತೇನೆ. ರಾಜಕಾರಣ ಮತ್ತು ಸರ್ಕಾರದಲ್ಲಿ ಈಗ ಬದಲಾವಣೆ ಆಗದಿದ್ದರೆ ಮುಂದೆಂದಿಗೂ ಆಗುವುದಿಲ್ಲ’ ಎಂದು ರಜನೀಕಾಂತ್ ಹೇಳಿದರು.
“ಹೊಸ ಅಭಿಯಾನ ನಡೆಸಬೇಕಿದೆ”
ನಮ್ಮ ರಾಜಕೀಯ ಪಕ್ಷ ‘ಏಕ ವ್ಯಕ್ತಿ’ ಮೇಲೆ ಕೇಂದ್ರೀಕೃತ ಆಗಿರಬಾರದು. ತಮಿಳುನಾಡಿನ ರಾಜಕೀಯದಲ್ಲಿ ಬದಲಾವಣೆ ತರೋದು ನನ್ನ ಗುರಿ. ಸದ್ಯ ತಮಿಳುನಾಡಿನ 2 ಪ್ರಮುಖ ರಾಜಕೀಯ ಪಕ್ಷಗಳಲ್ಲಿ ನಾಯಕರೇ ಇಲ್ಲ. ನಮ್ಮ ರಾಜಕಾರಣದಲ್ಲಿ ಇಬ್ಬರು ಮಹಾನ್ ನಾಯಕರು. ಒಬ್ಬರು ಜಯಲಲಿತಾ ಹಾಗೂ ಇನ್ನೊಬ್ಬರು ಕಲೈನಾರ್ . ಜನರು ಅವರಿಗಾಗಿ ಮತ ನೀಡಿದರು, ಆದರೆ ಈಗ ನಿರ್ವಾತ ಸ್ಥಿತಿ ಎದುರಾಗಿದೆ. ಬದಲಾವಣೆ ತರಲು ನಾವು ಈಗ ಹೊಸ ಅಭಿಯಾನ ನಡೆಸಬೇಕಿದೆ’ ಎಂದರು.
“ನಾನೇ ಮನೆ ಬಾಗಿಲಿಗೆ ಹೋಗುತ್ತೇನೆ”
ನನ್ನ ರಾಜಕೀಯದ ಐಡಿಯಾಲಜಿ ಕೇಳಿ ಬಹುತೇಕರು ಅದನ್ನ ರಿಜೆಕ್ಟ್ ಮಾಡಿದ್ರು, ಇಂಥ ಐಡಿಯಾಲಜಿ ತಮಿಳುನಾಡಿನಲ್ಲಿ ವರ್ಕೌಟ್ ಆಗೋದಿಲ್ಲ ಅಂತ ಹೇಳಿದ್ರು. ಹೀಗಾಗಿ ನಾನೇ ನಿವೃತ್ತ ನ್ಯಾಯಮೂರ್ತಿಗಳು, ತಜ್ಞರು, ನಿವೃತ್ತ ಐಪಿಎಸ್, ಐಎಎಸ್ ಅಧಿಕಾರಿಗಳ ಮನೆ ಬಾಗಿಲಿಗೆ ಹೋಗುತ್ತೇನೆ. ಸಮರ್ಥ ನಾಯಕರನ್ನು ಮನೆಮನೆಯಿಂದ ಕರೆದುಕೊಂಡು ಬರುತ್ತೇನೆ. ಬೇರೆ ಪಕ್ಷದಲ್ಲಿರುವ ಸಮರ್ಥರು, ಪ್ರಾಮಾಣಿಕರನ್ನ ಸಹ ಕರೆ ತರುತ್ತೇನೆ ಎಂದರು.