ಕೋವಿಡ್-19 ವಿರುದ್ಧ ಲಸಿಕೆಗಿಂತ ಮಾಸ್ಕ್ ಸುರಕ್ಷಿತ – ಸಿಡಿಸಿ ನಿರ್ದೇಶಕ ರಾಬರ್ಟ್
ವಾಷಿಂಗ್ಟನ್, ಸೆಪ್ಟೆಂಬರ್19: ಮಾಸ್ಕ್ ಗಳು ಕೊರೋನವೈರಸ್ ವಿರುದ್ಧ ರಾಷ್ಟ್ರವು ಹೊಂದಿರುವ ಅತ್ಯಂತ ಶಕ್ತಿಶಾಲಿ ಸಾರ್ವಜನಿಕ ಆರೋಗ್ಯ ಸಾಧನ ಮತ್ತು ಲಸಿಕೆಗಿಂತ ಉತ್ತಮ ರಕ್ಷಣೆ ನೀಡಬಹುದು ಎಂದು ಯು.ಎಸ್. ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ ಮುಖ್ಯಸ್ಥರು ಬುಧವಾರ ಶಾಸಕರಿಗೆ ತಿಳಿಸಿದ್ದಾರೆ.
ಮಾಸ್ಕ್ ಕೆಲಸ ಮಾಡುವ ಸ್ಪಷ್ಟ ವೈಜ್ಞಾನಿಕ ಪುರಾವೆಗಳು ನಮ್ಮಲ್ಲಿವೆ. ಅವು ನಮ್ಮ ಅತ್ಯುತ್ತಮ ರಕ್ಷಣಾ ಕವಚ ಎಂದು ಅಮೆರಿಕದ ರೋಗಗಳ ನಿಯಂತ್ರಣ ಮತ್ತು ತಡೆ ಕೇಂದ್ರಗಳ (ಸಿಡಿಸಿ) ನಿರ್ದೇಶಕ ಡಾ. ರಾಬರ್ಟ್ ರೆಡ್‌ಫೀಲ್ಡ್ ಹೇಳಿದ್ದಾರೆ. ನಾನು ಕೋವಿಡ್ ಲಸಿಕೆ ತೆಗೆದುಕೊಳ್ಳುವುದಕ್ಕಿಂತಲೂ ಈ ಮಾಸ್ಕ್ ಕೋವಿಡ್ ವಿರುದ್ಧ ನನ್ನನ್ನು ರಕ್ಷಿಸಲು ಹೆಚ್ಚು ಭರವಸೆ ನೀಡುತ್ತದೆ ಎಂದು ನಂಬಿದ್ದೇನೆ ಎಂದು ಅವರು ಹೇಳಿದರು.
ಅಮೆರಿಕದಲ್ಲಿ ನವೆಂಬರ್ ಮೊದಲ ವಾರದಲ್ಲಿ ಪ್ರಥಮ ಕೋವಿಡ್ ಲಸಿಕೆ ಲಭ್ಯವಾಗುತ್ತದೆ ಎಂದು ಹೇಳಲಾಗುತ್ತಿರುವ ಸಂದರ್ಭದಲ್ಲಿ ರಾಬರ್ಟ್ ಅವರ ಹೇಳಿಕೆ ಮಹತ್ವವನ್ನು ಪಡೆದುಕೊಂಡಿದೆ. ಕೋವಿಡ್ ವಿರುದ್ಧದ ಲಸಿಕೆಯಿಂದ ಕೇವಲ ಒಬ್ಬರಿಗಷ್ಟೇ ಪ್ರಯೋಜನ ಮತ್ತು ಕೆಲವು ಸಂದರ್ಭದಲ್ಲಿ ಅದು ಪರಿಣಾಮಕಾರಿಯಾಗದೆ ಇರುವ ಸಂಭವವಿದೆ.ಆದರೆ ಫೇಸ್‍ಮಾಸ್ಕ್ ಪ್ರತಿಯೊಬ್ಬರಿಗೂ ರಕ್ಷಣೆ ನೀಡುವ ಜೊತೆಗೆ ಇತರರಿಗೆ ಸೋಂಕು ಹರಡದಂತೆ ತಡೆಯುತ್ತದೆ ಎಂದು ಅವರು ಹೇಳಿದರು.








