ಮಡಿಕೇರಿ: ಕೊಡಗು ಜಿಲ್ಲೆಯ ವಿವಿಧೆಡೆ ಕಳೆದ ರಾತ್ರಿಯಿಂದ ನಿರಂತರ ಮಳೆಯಾಗುತ್ತಿದೆ. ಮಡಿಕೇರಿ ತಾಲೂಕಿನ ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ನೀರಿನಮಟ್ಟ ಏರಿಕೆಯಾಗುತ್ತಿದೆ. ನಾಪೊಕ್ಲು, ಸುಂಟಿಕೊಪ್ಪ, ಮಾದಾಪುರದಲ್ಲೂ ನಿರಂತರವಾಗಿ ಮಳೆಯಾಗುತ್ತಿದೆ.

ಹೀಗಾಗಿ ಹಳ್ಳ, ಕೊಳ್ಳಗಳು, ಕಾವೇರಿ ನದಿಯಲ್ಲೂ ನೀರಿನ ಹರಿವು ಏರಿಕೆಯಾಗಿದೆ. ನದಿಪಾತ್ರದ ಜನರಲ್ಲಿ ಮತ್ತೆ ಆತಂಕ ಸೃಷ್ಟಿಯಾಗಿದೆ. ಮಡಿಕೇರಿ, ಗಾಳಿಬೀಡು, ಕಾಲೂರು, ಮೂರ್ನಾಡು, ಸೋಮವಾರಪೇಟೆ, ಕುಶಾಲನಗರ, ಕೂಡಿಗೆ ಸುತ್ತಮುತ್ತ ನಿರಂತರ ಮಳೆ ಸುರಿಯುತ್ತಿದೆ.

ಮಡಿಕೇರಿ ಸೇರಿದಂತೆ ಜಿಲ್ಲೆಯಾದ್ಯಂತ ದಟ್ಟವಾದ ಮೋಡ ಕವಿದ ವಾತಾವರಣ ಇದೆ. ಆಗಾಗ ಬಿಟ್ಟು ಬಿಡದೇ ಮಳೆ ಸುರಿಯುತ್ತಿದ್ದು, ಚಳಿಯ ವಾತಾವರಣ ಇದೆ. ಸೆಪ್ಟೆಂಬರ್‍ನಲ್ಲೂ ಅಗಸ್ಟ್‍ನಲ್ಲಿ ಸುರಿದ ಮಹಾಮಳೆಯಾಗುವಂತಹ ವಾತಾವರಣದಲ್ಲಿ ಕಂಡು ಬರುತ್ತಿದೆ. ಹೀಗಾಗಿ ಕೊಡಗು ಜಿಲ್ಲಾಡಳಿತ ಇಂದಿನಿಂದ 22 ರ ವರೆಗೆ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಕೊಡಗು ಜಿಲ್ಲೆಯ ಗುಡ್ಡಗಾಡು ಹಾಗೂ ನದಿ ಪಾತ್ರದ ಜನರು ಎಚ್ಚರಿಕೆಯಿಂದ ಇರುವಂತೆ ಜಿಲ್ಲಾಡಳಿತ ಮನವಿ ಮಾಡಿದೆ.








