ಬೆಂಗಳೂರು : ಯಾವುದೇ ತಪ್ಪು ಮಾಡಿಲ್ಲಾಂದ್ರೆ ಅಧಿವೇಶನ ನಡೆಸಿ.
ತಪ್ಪು ಮಾಡಿದ್ದೇ ಆದ್ರೆ ಅಧಿಕಾರದಿಂದ ಕೆಳಕ್ಕೆ ಇಳಿಯಿರಿ ಎಂದು ಸರ್ಕಾರದ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ವಾಗ್ದಾಳಿ ನಡೆಸಿದ್ದಾರೆ.
ವಿಧಾನಮಂಡಲ ಕಲಾಪ ಮೊಟಕುಗೊಳಿಸುವ ಬಗ್ಗೆ ವಿಧಾನಸೌಧದಲ್ಲಿ ಮಾತನಾಡಿದ ಡಿಕೆಶಿ, ವಿಧಾನಮಂಡಲದ ಕಲಾಪವನ್ನು ಮೊಟಕುಗೊಳಿಸಬಾರದು.
ಇದರಿಂದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆಯಾಗುತ್ತೆ.
ನಾವು ಸುಮಾರು 1,670 ಪ್ರಶ್ನೆಗಳನ್ನು ಮುಂದಿಟ್ಟಿದ್ದೇವೆ.
ಎಲ್ಲದಕ್ಕೂ ಸರ್ಕಾರ ಉತ್ತರವನ್ನು ನೀಡಬೇಕು ಎಂದು ಹೇಳಿದರು.
ಇನ್ನು ಸದನದಲ್ಲಿ 30 ವಿಧೇಯಕಗಳ ಮೇಲೆ ಚರ್ಚೆ ಆಗಬೇಕು.
ಒಂದೊಂದು ವಿಧೇಯಕದ ಚರ್ಚೆಗೆ ಕನಿಷ್ಟ 2 ಗಂಟೆ ಬೇಕು. ಜೊತೆಗೆ, ಸರ್ಕಾರದ ವಿರುದ್ಧ ಭ್ರಷ್ಟಾಚಾರ ಆರೋಪವಿದೆ.
ಇದರ ಬಗ್ಗೆಯೂ ಸರ್ಕಾರ ಸ್ಪಷ್ಟನೆ ನೀಡಬೇಕು. ಕಲಾಪದಲ್ಲಿ ಎಲ್ಲ ವಿಚಾರಗಳ ಬಗ್ಗೆ ವಿಸ್ತೃತವಾಗಿ ಚರ್ಚೆ ಆಗಬೇಕಿದೆ.
ಕೋವಿಡ್ ಕಾರಣ ನೀಡಿ ಕಲಾಪ ಮೊಟಕುಗೊಳಿಸಬಾರದು ಎಂದು ಡಿಕೆಶಿವಕುಮಾರ್ ಆಗ್ರಹಿಸಿದ್ದಾರೆ.








