ಮಡಿಕೇರಿ: ಕೊಡಗು ಜಿಲ್ಲೆಯ ಪಶ್ಚಿಮ ಘಟ್ಟದಲ್ಲಿ ಹುಟ್ಟಿ ಶ್ರೀಕ್ಷೇತ್ರ ಧರ್ಮಸ್ಥಳದ ಪಾವನಿ ನೇತ್ರಾವತಿ ಸೇರುವರೆಗೂ ಹರಿಯಲ್ಪಡುವ ಕುಮಾರಧಾರೆಯಿಂದ ಧುಮ್ಮಿಕ್ಕುವ ಮಲ್ಲಳ್ಳಿ ಜಲಪಾತ ಪ್ರವಾಸಿಗರ ಪ್ರವೇಶಕ್ಕೆ ಮುಕ್ತಗೊಂಡಿದೆ.
ಮಡಿಕೇರಿಯ ಅಬ್ಬಿ ಜಲಪಾತ, ವಿರಾಜಪೇಟೆಯ ಕುರ್ಚಿ ಗ್ರಾಮದ ಇರ್ಪು ಜಲಪಾತಕ್ಕೆ ಪ್ರವೇಶ ಆರಂಭವಾಗಿರುವ ಬೆನ್ನಲ್ಲೇ ಮಲ್ಲಳ್ಳಿಗೂ ಪ್ರವೇಶ ಮಾಡಬಹುದಾಗಿದೆ.

ಕೊಡಗಿನಲ್ಲಿ ಮಳೆ ಆರ್ಭಟ ಮುಂದುವರೆದಿರುವ ಹಿನ್ನಲೆಯಲ್ಲಿ ಅತ್ತ ಹಾಸನ ಭಾಗದಿಂದ ನೀರು ಕುಮಾರಧಾರನಿಗೆ ಸೇರಿ ಮೈನವಿರೇಳಿಸುವ ದೃಶ್ಯ ಕಾಣ ಸಿಗುವ ಮಲ್ಲಳ್ಳಿ ಜಲಪಾತ ಇರೋದು ಹಾಸನ ಮತ್ತು ಕೊಡಗು ಗಡಿ ಭಾಗದಲ್ಲಿ. ಸೋಮವಾರಪೇಟೆಗೆ ಬಂದು ಶಾಂತಳ್ಳಿ ಮೂಲಕ ಸ್ವಲ್ಪ ದೂರ ಕ್ರಮಿಸಿದರೆ ಸಾಕು ಒಂದು ಜಂಕ್ಷನ್, ಅಲ್ಲಿಂದ ನಿಮ್ಮದೇ ವಾಹನವಿದ್ದರೆ ಒಂದೆರೆಡು ಕಿಲೋಮೀಟರ್ ಹಚ್ಚ ಹಸುರಿನ ದಾರಿಯಲ್ಲಿ ಸಾಗಿದರೆ ಒಂದು ಪಾಕಿರ್ಂಗ್ ಸ್ಥಳ ಸಿಗಲಿದ್ದು, ಅಲ್ಲಿಂದಲೇ ಮಲ್ಲಳ್ಳಿಯ ರೌದ್ರತೆ ಕೇಳಿ ಬರುತ್ತದೆ. ಕಾಲ್ನಡಿಗೆಯಲ್ಲಿ ಸಾಗಿದರೆ ಹತ್ತು ನಿಮಿಷದಲ್ಲಿ ವೀಕ್ಷಣೆಗೆ ತಲುಪಬಹುದು. ವಾಹನಕ್ಕೆ ಹೆಚ್ಚುವರಿ ಶುಲ್ಕ ಬೇಡ, ಮಳೆ ಇಲ್ಲದಿದ್ದರೆ ನಡೆದುಕೊಂಡೇ ಹೋದರೆ ಖರ್ಚು ಮಿಕ್ಕಲಿದೆ.
ಅಪಾಯ ತಪ್ಪಿದಲ್ಲ, ಮೋಜು ಮಸ್ತಿ ಬೇಡ
ಜಲಪಾತಕ್ಕೆ ತೆರಳುವುದು ಸುಮ್ಮನೇ ಅಲ್ಲ. ನಮ್ಮ ಜೋಪಾನ ನಮಗೆ ಮುಖ್ಯವಾಗಿರುತ್ತದೆ. ಜಲಪಾತದಲ್ಲಿ ನೀರಿನ ಹರಿವು ಹೆಚ್ಚಾಗಿದ್ದು ಹತ್ತಿರದಿಂದ ನೋಡಲು ಅವಕಾಶವಿದ್ದರೂ, ದೂರದಿಂದಲೇ ನೋಡಿ ಆಸ್ವಾದಿಸಿ, ಮೋಜು ಮಸ್ತಿಗೆ ಪ್ರವಾಸಿಗರು ಪ್ರಯತ್ನ ಮಾಡದೇ ಇರುವುದು ಒಳಿತು. ಏಕೆಂದರೆ ಜಲಪಾತದಲ್ಲಿ ನೀರಿನ ಹರಿವು ಹೆಚ್ಚಿರುವ ಹಿನ್ನೆಲೆಯಲ್ಲಿ ನಮ್ಮ ಸೇಫ್ಟಿ ಬಗ್ಗೆ ಜಾಗರೂಕತೆ ಇರಬೇಕು.
ಹೊಟೇಲ್ ವ್ಯವಸ್ತೆ ಇಲ್ಲ
ಈ ಪ್ರದೇಶದಲ್ಲಿ ಹೋಟೆಲ್ ಆಗಲಿ, ಕ್ಯಾಂಟೀನ್ ಆಗಲಿ ವ್ಯವಸ್ಥೆಗಳಿಲ್ಲ. ಜಲಪಾತಕ್ಕೆ ಪ್ರವೇಶ ನೀಡುವ ಮೊದಲೇ ಕೆಲವೊಂದು ಮನೆಗಳಲ್ಲಿ ಆಹಾರ ಮಾಡಿಕೊಡುವ ವ್ಯವಸ್ಥೆಯಿದೆ. ಮಾಂಸದ ಆಹಾರ ಬೇಕಾದಲ್ಲಿ ನೀವೇ ನಿಮ್ಮ ತಂಡದ ಮಂದಿಗೆ ತಕ್ಕಷ್ಟು ಮಾಂಸ ಕೊಟ್ಟು ವಾಪಸ್ ಬರುವಷ್ಟರಲ್ಲಿ ಆಹಾರ ತಯಾರಾಗಿರುತ್ತದೆ. ಕೊಡಗಿನ ಖಾದ್ಯಗಳು ಸಿಗುತ್ತವೆ. ನಿರ್ಧಿಷ್ಟ ಬಿಲ್ ಜೊತೆ ಚಳಿ ಮಳೆಯಿಂದ ಜಲಪಾತ ನೋಡಿ ವಾಪಸ್ ಬಂದವರಿಗೆ ಬಿಸಿ ಬಿಸಿ ಊಟ ಸಿಗಲಿದೆ.
ಕೃಪೆ: ಗಿರಿಧರ್ ಕೊಂಪುಳೀರಾ








