ಬೆಂಗಳೂರು: ಭೂಸುಧಾರಣಾ ಕಾಯ್ದೆ, ಎಪಿಎಂಸಿ, ವಿದ್ಯುತ್ ಕಾಯ್ದೆ ಸೇರಿದಂತೆ ಮೂರು ತಿದ್ದುಪಡಿ ಕಾಯ್ದೆಗಳನ್ನು ವಾಪಸ್ ಪಡೆಯುವಂತೆ ಆಗ್ರಹಿಸಿ ಶುಕ್ರವಾರ ದೇಶಾದ್ಯಂತ ಭಾರತ್ ಬಂದ್‍ಗೆ ಕರೆ ನೀಡಲಾಗಿದೆ.
ರಾಜ್ಯದಲ್ಲೂ ಭಾರತ್ ಬಂದ್ ಬೆಂಬಲಿಸಿ ಕರ್ನಾಟಕ ಬಂದ್‍ಗೆ ಕರೆ ನೀಡಲು 29 ಸಂಘಟನೆಗಳ ಐಕ್ಯ ಹೋರಾಟ ಸಮಿತಿ ನಿರ್ಧರಿಸಿದೆ. ಆದರೆ, ಬಂದ್‍ಗೆ ಸಿದ್ಧತೆ, ತಾಂತ್ರಿಕ ವಿಚಾರಗಳು, ಬಂದ್‍ನ ರೂಪುರೇಷೆಗಳ ಬಗ್ಗೆ ದೇಶದ 207 ಸಂಘಟನೆಗಳ ಜತೆ ಆನ್‍ಲೈನ್ ಮೂಲಕ ಸಭೆ ನಡೆಸಲಾಗುತ್ತಿದೆ. ಸಭೆಯ ನಂತರ ಭಾರತ್ ಬಂದ್‍ಗೆ ಬೆಂಬಲ ನೀಡುವ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ರೈತ ಸಂಘದ ಮುಖಂಡ ಕುರುಬೂರು ಶಾಂತಕುಮಾರ್ ಹೇಳಿದ್ದಾರೆ.
ಬಂದ್‍ಗೆ ಕನ್ನಡಪರ, ರೈತ, ಕಾರ್ಮಿಕ ಹಾಗೂ ದಲಿತ ಸಂಘಟನೆಗಳು, ಬೀದಿಬದಿ ವ್ಯಾಪಾರಿಗಳ ಸಂಘ, ಆಟೋ, ಓಲಾ-ಉಬರ್ ಸೇರಿದಂತೆ ಹಲವು ಸಂಘಟನೆಗಳು ಬೆಂಬಲ ಸೂಚಿಸಿವೆ. ಹೀಗಾಗಿ ಇಂದು ಸಭೆ ನಡೆಸಿ ನಾಳೆ ಬಂದ್ ಬಗ್ಗೆ ಅಧಿಕೃತ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ರೈತ ಸಂಘಟನೆಗಳು ತಿಳಿಸಿವೆ.
ರೈತರಿಗೆ ಮಾರಕವಾದ ತಿದ್ದುಪಡಿ ಕಾಯ್ದೆಗಳನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ವಾಪಸ್ ಪಡೆಯಬೇಕು. ಅಲ್ಲಿಯವರೆಗೆ ರೈತರ ಹೋರಾಟ ನಿಲ್ಲುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ರೈತರ ಹೋರಾಟ ರಾಜಕೀಯ ಪ್ರೇರಿತ ಎಂದು ಕೃಷಿ ಸಚಿವ ಬಿ.ಸಿ ಪಾಟೀಲ್ ಹೇಳಿದ್ದಾರೆ. ಆದರೆ, ನಮ್ಮ ಪ್ರತಿಭಟನೆ ರಾಜಕೀಯ ಪ್ರೇರಿತ ಅಲ್ಲ. ರೈತರ ಹಕ್ಕಿಗಾಗಿ ನಾವು ಹೋರಾಟ ಮಾಡುತ್ತಿದ್ದೇವೆ ಎಂದು ರೈತ ಸಂಘಟನೆಗಳು ಸ್ಪಷ್ಟನೆ ನೀಡಿವೆ.
ರೈತರ ಹೋರಾಟಕ್ಕೆ `ಕೈ’ ಬೆಂಬಲ
ಭೂಸುಧಾರಣಾ ಕಾಯ್ದೆ, ಎಪಿಎಂಸಿ, ವಿದ್ಯುತ್ ಕಾಯ್ದೆ ತಿದ್ದುಪಡಿ ವಿರೋಧಿಸಿ ರೈತರು ನಡೆಸುತ್ತಿರುವ ಹೋರಾಟಕ್ಕೆ ಕಾಂಗ್ರೆಸ್‍ನ ಬೆಂಬಲ ಇದೆ. ಭಾರತ್ ಬಂದ್‍ಗೆ ಬೆಂಬಲ ನೀಡುವ ಬಗ್ಗೆ ಹಿರಿಯ ನಾಯಕರೊಂದಿಗೆ ಚರ್ಚಿಸಿ ತೀರ್ಮಾನ ತಿಳಿಸುವುದಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.
ನಿನ್ನೆಯಿಂದ ರೈತರು ಹೋರಾಟ ನಡೆಸುತ್ತಿರುವ ಫ್ರೀಡಂಪಾರ್ಕ್‍ಗೆ ಆಗಮಿಸಿ ಬೆಂಬಲ ಸೂಚಿಸಿದ ಡಿಕೆಶಿ, ವಿಧಾನಮಂಡಲದಲ್ಲಿ ತಿದ್ದುಪಡಿ ಕಾಯ್ದೆಗಳ ವಿರುದ್ಧ ಕಾಂಗ್ರೆಸ್ ಹೋರಾಟ ನಡೆಸಲಿದೆ. ಆದರೆ, ನಮ್ಮದು ರಾಜಕೀಯ ಪಕ್ಷ. ನಾನೊಬ್ಬನೇ ನಿರ್ಧಾರ ತೆಗೆದುಕೊಳ್ಳಲು ಬರುವುದಿಲ್ಲ. ಹಿರಿಯ ನಾಯಕರ ಜತೆ ನಾಳೆ ಚರ್ಚೆ ನಡೆಸುತ್ತೇನೆ. ಚರ್ಚಿಸಿದ ನಂತರ ಬಂದ್‍ಗೆ ಬೆಂಬಲ ನೀಡುವ ಬಗ್ಗೆ ತೀರ್ಮಾನ ಮಾಡುತ್ತೇವೆ ಎಂದು ಡಿಕೆಶಿ ಹೇಳಿದ್ದಾರೆ.
ಪರಿಷತ್‍ನಲ್ಲಿ ಜೆಡಿಎಸ್ ಬೆಂಬಲ ಪಡೆದು ರೈತ ವಿರೋಧಿ ತಿದ್ದುಪಡಿ ಕಾಯ್ದೆಗಳ ವಿರುದ್ಧ ಹೋರಾಟ ಮಾಡುತ್ತೇವೆ. ನಮ್ಮ ಹೋರಾಟಕ್ಕೆ ಜೆಡಿಎಸ್ ಬೆಂಬಲ ಸಿಕ್ಕರೆ ಕಾಯ್ದೆ ಜಾರಿ ಆಗಲ್ಲ. ರೈತರ ಹೋರಾಟ ರಾಜ್ಯಕ್ಕೆ, ರೈತರಿಗಾಗಿ ಇದೆ, ಕಾಂಗ್ರೆಸ್ ಪಕ್ಷ ಹೋರಾಟದ ಪರ ಇದೆ. ಯಾವ ರೈತರು ಕೃಷಿ ಜಮೀನನ್ನು ಮಾರಾಟ ಮಾಡಲು ಅವಕಾಶ ನೀಡಬಾರದು ಎಂದು ಮನವಿ ಮಾಡಿದರು.