ಬೆಂಗಳೂರು: ಕಳೆದ ತಿಂಗಳು ರಾಜಧಾನಿ ಬೆಂಗಳೂರಿನ ಕೆ.ಜೆ ಹಳ್ಳಿ ಹಾಗೂ ಡಿ.ಜೆ ಹಳ್ಳಿಯಲ್ಲಿ ನಡೆದ ಹಲಭೆ ಹಾಗೂ ಹಿಂಸಾಚಾರದ ತನಿಖೆಯನ್ನು ಕೇಂದ್ರ ಗೃಹ ಸಚಿವಾಲಯ ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್ಐಎ) ವಹಿಸಿದೆ.
ಕಾನೂನುಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯ್ದೆ (ಯುಎಪಿಎ), ಬೆಂಕಿ ಹಚ್ಚುವುದು, ಹಿಂಸಾಚಾರ ಮತ್ತು ಸಾರ್ವಜನಿಕ ಆಸ್ತಿ ಹಾನಿಗೆ ಸಂಬಂಧಿಸಿ ಎರಡು ಪ್ರತ್ಯೇಕ ಎಫ್ಐಆರ್ ಗಳನ್ನು ಎನ್ಐಎನಲ್ಲಿ ದಾಖಲಿಸಲಾಗಿದೆ ಎಂದು ಎನ್ಐಎ ಮೂಲಗಳು ತಿಳಿಸಿವೆ.

ಐಜಿಪಿ rankನ ಪೊಲಿಸ್ ಅಧಿಕಾರಿ ನೇತೃತ್ವದ ತಂಡವನ್ನು ಬೆಂಗಳೂರಿಗೆ ಕಳುಹಿಸಲಾಗಿದೆ ಎಂದು ಎನ್ಐಎ ಅಧಿಕಾರಿ ಮಾಹಿತಿ ನೀಡಿದ್ದಾರೆ.
ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಸಹೋದರಿಯ ಮಗ, ನವೀನ್ ಪ್ರವಾದಿ ಮೊಹ್ಮದ್ ಕುರಿತ ಅವಹೇಳನಕಾರಿ ಪೋಸ್ಟ್ ನ್ನು ಫೇಸ್ಬುಕ್ನಲ್ಲಿ ಹಾಕಿದ್ದ. ಆತನ ಬಂಧಿಸಲು ವಿಳಂಬ ಮಾಡಿದ್ದನ್ನು ಖಂಡಿಸಿ ಗುಂಪೊಂದು ಆಗಸ್ಟ್ 11ರ ರಾತ್ರಿ ಶಾಸಕರ ಮನೆ ಮುಂದೆ ಪ್ರತಿಭಟನೆ ನಡೆಸಿ ಅವರ ಮನೆಗೆ ಬೆಂಕಿ ಹಚ್ಚಿ ಧ್ವಂಸ ಮಾಡಿತ್ತು.
ಮತ್ತೆ ಕೆಲ ಗುಂಪುಗಳು ಡಿ.ಜೆ ಹಳ್ಳಿ ಹಾಗೂ ಕೆ.ಜೆ ಹಳ್ಳಿ ಪೊಲಿಸ್ ಠಾಣೆಗಳ ಮೇಲೂ ದಾಳಿ ಮಾಡಿ ಬೆಂಕಿ ಹಚ್ಚಿದ್ದವು. ಗಲಭೆ ನಿಯಂತ್ರಿಸಲು ಪೊಲೀಸರು ಗೋಲಿಬಾರ್ ಮಾಡಿದ್ದರು. ಹಿಂಸಾಚಾರಕ್ಕೆ ಸಂಬಂಧಿಸಿದಂತೆ 500ಕ್ಕೂ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಗಲಭೆ ಹಿಂದೆ ಎಸ್ಡಿಪಿಐ ಕೈವಾಡ ಇದೆ ಎಂಬ ಆರೋಪಿಸಲಾಗಿದೆ. ಎಸ್ಡಿಪಿಐನ ರಾಜ್ಯ ಘಟಕದ ಕಾರ್ಯದರ್ಶಿ ಮುಜಾಮಿಲ್ ಪಾಷಾ ಗಲಭೆಗೆ ಪ್ರಚೋದನೆ ನೀಡಿದ ಆರೋಪದಡಿ ಅತನನ್ನು ಬಂಧಿಸಲಾಗಿದೆ. ಗುಂಪನ್ನು ಪ್ರಚೋದಿಸಿ, ಹಿಂಸಾಚಾರ ನಡೆಸುವಂತೆ ಪಿಎಫ್ಐ ಮತ್ತು ಎಸ್ಡಿಪಿಐ ಕಾರ್ಯಕರ್ತರಿಗೆ ನಿರ್ದೇಶನ ನೀಡಿದ್ದರು ಎಂಬ ಆರೋಪವೂ ಇದೆ.
ಅಲ್ಲದೆ, ಗಲಭೆ ಸಂಬಂಧ ಈಗಾಗಲೇ ಅರೆಸ್ಟ್ ಆಗಿರುವ ಆರೋಪಿಗಳಿಗೆ ಅಲ್ಖೈದಾ ಸೇರಿದಂತೆ ಕೆಲ ಉಗ್ರ ಸಂಘಟನೆಗಳ ಕೈವಾಡ ಇದೆ ಎಂಬ ಸಿಸಿಬಿ ತನಿಖೆಯಲ್ಲಿ ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆಯನ್ನು ರಾಜ್ಯ ಸರ್ಕಾರ ಎನ್ಐಎ ತನಿಖೆಗೂ ಶಿಫಾರಸು ಮಾಡಿತ್ತು. ರಾಜ್ಯ ಸರ್ಕಾರದ ಶಿಫಾರಸು ಆಧರಿಸಿ ಕೇಂದ್ರ ಗೃಹ ಇಲಾಖೆ ಎನ್ಐಎ ತನಿಖೆಗೆ ಆದೇಶ ಹೊರಡಿಸಿದೆ.








