ಬೆಂಗಳೂರು: ರಾಜ್ಯದಲ್ಲಿ ಡ್ರಗ್ಸ್ ಮಾಫಿಯಾ ಜೋರಾಗಿ ಸದ್ದು ಮಾಡುತ್ತಿರುವ ಬೆನ್ನಲ್ಲೇ ಬೆಂಗಳೂರಿನ ಸಿಟಿ ಮಾರ್ಕೆಟ್ ಪೊಲೀಸರು ಭರ್ಜರಿ ಬೇಟೆಯಾಡಿದ್ದಾರೆ.
ರಾಜಸ್ಥಾನದಿಂದ ಬೆಂಗಳೂರಿಗೆ ಡ್ರಗ್ಸ್ ತರಿಸಿಕೊಂಡು ಮಾರಾಟ ಮಾಡುತ್ತಿದ್ದ ಇಬ್ಬರನ್ನು ಬಂಧಿಸಲಾಗಿದ್ದು, 3.30 ಕೋಟಿ ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ. ಬಂಧಿತರಿಂದ 1.28 ಕೆ.ಜಿ ಬ್ರೌನ್ ಶುಗರ್, 475 ಗ್ರಾಂ ಓಪಿಯಮ್, 25 ಗ್ರಾಂ ಎಲ್‍ಎಸ್‍ಡಿ ಮಾತ್ರೆಗಳು, 32 ಗ್ರಾಂ ಎಂಡಿಎಂಎ ಡ್ರಗ್ಸ್‍ಗಳನ್ನು ಜಪ್ತಿ ಮಾಡಲಾಗಿದೆ.
ಬೆಂಗಳೂರಿನ ಮಾಗಡಿ ರಸ್ತೆ ನಿವಾಸಿ ರಾಜುರಾಮ್ ಹಾಗೂ ಕುಂಬಳಗೋಡು ನಿವಾಸಿ ಸುನಿಲ್ ಕುಮಾರ್ ಬಂಧಿತ ಆರೋಪಿಗಳು. ಆರೋಪಿಗಳು ಮೆಟಲ್ ರೇಲಿಂಗ್ ಟ್ರಕ್‍ಗಳ ಮೂಲಕ ರಾಜಸ್ಥಾನದಿಂದ ಬೆಂಗಳೂರಿಗೆ ಡ್ರಗ್ಸ್ ತರಿಸಿಕೊಂಡು ಸಿಟಿ ಮಾರ್ಕೆಟ್, ಮೆಟ್ರೋ ಸ್ಟೇಷನ್ ಸೇರಿದಂತೆ ನಗರದ ವಿವಿಧೆಡೆ ಮಾರಾಟ ಮಾಡುತ್ತಿದ್ದರು ಎಮದು ಪೊಲೀಸರು ತಿಳಿಸಿದ್ದಾರೆ.
30.23 ಕೆ.ಜಿ ಗಾಂಜಾ ಜಪ್ತಿ
ಮತ್ತೊಂದು ಕಾರ್ಯಾಚರಣೆಯಲ್ಲಿ ಖಚಿತ ಮಾಹಿತಿ ಪಡೆದ ಬೆಂಗಳೂರಿನ ಉತ್ತರ ವಿಭಾಗದ ಪೊಲೀಸರು 9 ಲಕ್ಷ ಮೌಲ್ಯದ 30.23 ಕೆ.ಜಿ ಗಾಂಜಾವನ್ನು ಜಪ್ತಿ ಮಾಡಿದ್ದಾರೆ.
ಮೂವರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು, 30.23 ಲಕ್ಷ ಮೌಲ್ಯದ ಗಾಂಜಾ ವಶಪಡಿಸಿಕೊಳ್ಳಲಾಗಿದ್ದು, ಗಾಂಜಾ ಜಾಲ ಭೇದಿಸಿದ ಪೊಲೀಸರ ತಂಡಕ್ಕೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್‍ಪಂತ್ 60 ಸಾವಿರ ಬಹುಮಾನ ಹಾಗೂ ಪ್ರಶಂಸನಾ ಪತ್ರವನ್ನು ನೀಡಿ ಗೌರವಿಸಿದ್ದಾರೆ.

ಇನ್ನೊಂದೆಡೆ, ಸಿಸಿಬಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ 6 ಮಂದಿ ಕ್ರಿಕೆಟ್ ಬುಕ್ಕಿಗಳನ್ನು ಅರೆಸ್ಟ್ ಮಾಡಿ 6 ಲಕ್ಷ ನಗದು ಜಪ್ತಿ ಮಾಡಿದ್ದಾರೆ.
ಬಂಧಿತರು ಐಪಿಎಲ್ ಟಿ-20 ಪಂದ್ಯಗಳ ಮೇಲೆ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದರು ಎಂದು ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.








