ತಂದೆಯನ್ನು ಸಮಾಧಾನ ಪಡಿಸಲು ಮಗಳಿಗೆ ಪಕ್ಷದ ವಕ್ತಾರೆ ಹುದ್ದೆ
ಬೆಂಗಳೂರು, ಸೆಪ್ಟೆಂಬರ್24: ಕಾಂಗ್ರೆಸ್ ಪಕ್ಷದಲ್ಲಿ ತಮ್ಮನ್ನು ಕಡೆಗಣಿಸಲಾಗುತ್ತಿದೆ ಎಂದು ಅಸಮಾಧಾನಗೊಂಡಿರುವ ಮಾಜಿ ಸಚಿವ ಮತ್ತು ಪ್ರಭಾವಿ ನಾಯಕ ರಾಮಲಿಂಗ ರೆಡ್ಡಿ ಅವರನ್ನು ಸಮಾಧಾನ ಪಡಿಸಲು ಅವರ ಪುತ್ರಿ ಮತ್ತು ಶಾಸಕಿ ಸೌಮ್ಯ ರೆಡ್ಡಿ ಅವರನ್ನು ಕಾಂಗ್ರೆಸ್ ಪಕ್ಷದ ವಕ್ತಾರೆಯನ್ನಾಗಿ ಮಾಡಲಾಗಿದೆ.
ಈ ಹಿಂದೆ ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರವಿದ್ದಾಗ ರಾಮಲಿಂಗಾರೆಡ್ಡಿ ಅವರಿಗೆ ಮಂತ್ರಿ ಸ್ಥಾನ ದೊರಕಿರಲಿಲ್ಲ. ಇದರಿಂದ ಅಸಮಾಧಾನಗೊಂಡ ರೆಡ್ಡಿ ಬಂಡಾಯ ಸಾರುವ ಮೂಲಕ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು. ಒಂದು ಹಂತದಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆಯನ್ನು ಕೂಡ ನೀಡಿದ್ದರು. ಬಳಿಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವಾರು ನಾಯಕರು ರಾಮಲಿಂಗಾರೆಡ್ಡಿ ಅವರನ್ನು ಸಮಾಧಾನ ಪಡಿಸಿ ರಾಜೀನಾಮೆ ಹಿಂಪಡೆಯುವಲ್ಲಿ ಯಶಸ್ವಿಯಾಗಿದ್ದರು.
ಅದಲ್ಲದೆ ಇತ್ತೀಚೆಗೆ ಎಐಸಿಸಿ ಪುನರ್ರಚನೆ ಮಾಡಲಾಗಿದ್ದ ಸಂದರ್ಭದಲ್ಲಿ ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರನ್ನು ತಮಿಳುನಾಡು, ಪುದುಚೇರಿ ಹಾಗು ಗೋವಾ ಉಸ್ತುವಾರಿಯಾಗಿ ನೇಮಿಸಲಾಗಿತ್ತು. ಕಾಂಗ್ರೆಸ್ ನ ಹಿರಿಯ ನಾಯಕ ಎಚ್.ಕೆ. ಪಾಟೀಲ್ ಅವರನ್ನು ಮಹಾರಾಷ್ಟ್ರ ರಾಜ್ಯದ ಉಸ್ತುವಾರಿಯನ್ನಾಗಿ ನೇಮಕ ಮಾಡಲಾಗಿತ್ತು ಮತ್ತು ಕೃಷ್ಣಭೈರೇಗೌಡ ಅವರನ್ನು ಎಐಸಿಸಿಯ ಕೇಂದ್ರ ಚುನಾವಣಾ ಸಮಿತಿ ಸದಸ್ಯರನ್ನಾಗಿ ನೇಮಕ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಕೂಡ ರಾಮಲಿಂಗಾರೆಡ್ಡಿ ತಮಗೆ ಯಾವುದೇ ಹುದ್ದೆ ನೀಡದೆ ಕಡೆಗಣಿಸಲಾಗಿದೆ ಎಂದು ಅಸಮಾಧಾನ ಹೊರಹಾಕಿದ್ದರು. ಅಷ್ಟೇ ಅಲ್ಲ ಇತ್ತೀಚೆಗೆ ನಡೆದ ಶಾಸಕಾಂಗ ಪಕ್ಷದ ಸಭೆ ಮತ್ತು ಅಧಿವೇಶನಕ್ಕೆ ಗೈರಾಗಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದರು. ಇದೀಗ ಸೌಮ್ಯ ರೆಡ್ಡಿ ಅವರನ್ನು ರಾಜ್ಯ ಕಾಂಗ್ರೆಸ್ ವಕ್ತಾರೆಯನ್ನಾಗಿ ನೇಮಿಸಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಆದೇಶ ಹೊರಡಿಸಿದ್ದು, ಈ ಮುಖಾಂತರ ರಾಮಲಿಂಗಾರೆಡ್ಡಿ ಅವರ ಅಸಮಾಧಾನ ತಣಿಸಲು ಮುಂದಾಗಿದೆ.