ಕೊರೋನಾ ವೈರಸ್ ಎಂಬ ಮಹಾ ಮಾರಿಗೆ ಇಡೀ ವಿಶ್ವವೇ ಸ್ತಬ್ಧವಾಗಿದೆ. ದೇಶಗಳು ಜಾಗತಿಕ ಪ್ರಪಂಚದ ಸಂಪರ್ಕ ಕಡಿದು ಕೊಂಡು, ಜನರು ತಮ್ಮ ಮನೆ, ತಮ್ಮ ಊರು, ತಮ್ಮ ದೇಶಗಳಿಗೆ ಸೀಮಿತರಾಗುವಂತೆ ಮಾಡಿದೆ. ಜಾಗತಿಕ ಷೇರು ಮಾರುಕಟ್ಟೆ ಕೊರೋನಾ ಹೊಡೆತಕ್ಕೆ ಬೆಚ್ಚಿಬಿದ್ದಿದ್ದು, ಇಡೀ ಜಗತ್ತೇ, ಜಾಗತಿಕ ಅರ್ಥಿಕ ಹಿಂಜರಿತದ ಮಹಾ ಕೂಪಕ್ಕೆ ಬೀಳುವ ಭೀತಿ ಉಂಟಾಗಿದೆ. ವಿಶ್ವಸಂಸ್ಥೆಯ ಅಂಗ ಸಂಸ್ಥೆ ಅಂಕ್ ಟಡ್, ಕೊರೋನಾ ವೈರಸ್ ನಿಂದಾಗಿ ವಿಶ್ವದ ಅರ್ಥ ವ್ಯವಸ್ಥೆಗೆ 2 ಟ್ರಿಲಿಯನ್ ಅಮೆರಿಕನ್ ಡಾಲರ್ ನಷ್ಟವಾಗುವ ಸಂಭವವಿದೆ ಎಂದು ಹೇಳಿದೆ. ಇದರಿಂದ ವಿಶ್ವದ ಅರ್ಥ ವ್ಯವಸ್ಥೆಯ ಬೆಳವಣಿಗೆಯ ದರ ಶೇ 2.5 ರಷ್ಟು ಕುಗ್ಗುವ ಸಾಧ್ಯತೆ ಇದೆ ಎಂದು ವಿಶ್ವ ಸಂಸ್ಥೆಯ ವ್ಯಾಪಾರ ಮತ್ತು ಅಭಿವೃದ್ಧಿ ಸಮ್ಮೇಳನದ ಜಾಗತೀಕರಣ ಮತ್ತು ಅಭಿವೃದ್ಧಿ ವಿಭಾಗದ ನಿರ್ದೇಶಕ ರಿಚರ್ಡ್ ಕೌಜೋ – ರೈಟ್ ಹೇಳಿದ್ದಾರೆ.
ಕೊರೋನಾ ಭೀತಿಯಿಂದ ದೇಶಗಳ ನಡುವಿನ ಪ್ರಯಾಣಕ್ಕೆ ನಿರ್ಬಂಧ
ಕೊರೋನಾ ಭೀತಿಯಿಂದ ಅನೇಕ ದೇಶಗಳು ಇತರ ದೇಶಗಳ ಪ್ರಯಾಣಕ್ಕೆ ನಿರ್ಬಂಧ ಹೇರಿದೆ. 110ಕ್ಕೂ ಹೆಚ್ಚು ದೇಶಗಳ 1.26 ಲಕ್ಷಕ್ಕೂ ಹೆಚ್ಚು ಮಂದಿಗೆ ಈಗಾಗಲೇ ಸೋಂಕು ತಗುಲಿದ್ದು, ಹಲವು ದೇಶಗಳಿಗೆ ವೀಸಾ ವಿತರಣೆಯನ್ನು ಸ್ಥಗಿತಗೊಳಿಸಿದೆ.
ಕೊರೋನಾಗೆ ದೇಶಗಳು ತತ್ತರ
ಕೊರೋನಾ ವೈರಸ್ ಗೆ ಕಡಿವಾಣ ಹಾಕಲು ಹರಸಾಹಸ ಪಡುತ್ತಿರುವ ಇಟಲಿ ಸರ್ಕಾರ ಗುರುವಾರ ಔಷಧಿ ಮತ್ತು ಆಹಾರದ ಅಂಗಡಿಗಳನ್ನು ಹೊರತು ಪಡಿಸಿ, ಬೇರಾವ ಅಂಗಡಿ ಮುಂಗಟ್ಟುಗಳನ್ನು ತೆರೆಯುವಂತಿಲ್ಲ ಎಂದು ಆದೇಶ ನೀಡಿದೆ. ಮನೆಯಿಂದ ಹೊರಗೆ ಬರದಂತೆ ಪ್ರಧಾನಿ ಗಿಸೆಪ್ಛೆ ಕಾಂಟೆ ನಾಗರಿಕರಲ್ಲಿ ಮನವಿ ಮಾಡಿದ್ದಾರೆ. ಚೀನಾದ ಬಳಿಕ ಇಟಲಿಯಲ್ಲಿ ಹೆಚ್ಚಿನ ಸಾವು ನೋವುಗಳು ಸಂಭವಿಸಿದ್ದು, ದೇಶವೇ ಒಂದು ರೀತಿಯಲ್ಲಿ ಸ್ತಬ್ಧವಾಗಿದೆ.
ರಷ್ಯಾ ಮತ್ತು ಐರೋಪ್ಯ ಬಾಹ್ಯಾಕಾಶ ಸಂಸ್ಥೆಗಳು ಕೈಗೊಳ್ಳಲು ನಿರ್ಧರಿಸಿದ್ದ ಮಂಗಳಯಾನ ಯೋಜನೆಯನ್ನು ಎರಡು ವರ್ಷಗಳ ಕಾಲ ಮುಂದೂಡಿದೆ.
ಮಧ್ಯ ಪ್ರಾಚ್ಯ ದೇಶಗಳಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 10 ಸಾವಿರದ ಗಡಿ ದಾಟಿದ್ದರೆ, ದಕ್ಷಿಣ ಕೊರಿಯಾದಲ್ಲಿ 7869ಕ್ಕೆ ಏರಿದೆ. ಇರಾನ್ ನಲ್ಲಿ ಕೊರೋನಾದಿಂದ ಸತ್ತವರ ಸಂಖ್ಯೆ 429ಕ್ಕೆ ಏರಿದೆ.
ಭಾರತೀಯ ಮೂಲದವರಿಂದ ಆ್ಯಪ್ ಅಭಿವೃದ್ಧಿ
ಇವೆಲ್ಲದರ ಮಧ್ಯೆ ಆಸ್ಟ್ರೇಲಿಯಾ ಮತ್ತು ಅಮೆರಿಕದಲ್ಲಿ ಇರುವ ಇಬ್ಬರು ಭಾರತೀಯ ಮೂಲದ ಸಂಶೋಧಕರು ಕೊರೊನಾವೈರಸ್ ಸೊಂಕು ತಗುಲಿದೆಯೇ ಎಂದು ಪತ್ತೆ ಹಚ್ಚುವ ಆ್ಯಪ್ ಅನ್ನು ಅಭಿವೃದ್ಧಿ ಪಡಿಸಿದ್ದಾರೆ. ಈ ಆ್ಯಪ್ ಮೂಲಕ ಜನರು ತಮ್ಮ ದೇಹವನ್ನು ತಾವೇ ಸ್ಕ್ರೀನಿಂಗ್ ಮಾಡಿಕೊಂಡು, ತಮ್ಮ ದೇಹದ ಮೇಲೆ ವೈರಸ್ ದಾಳಿ ಆಗಿದೆಯೇ ಎಂದು ತಿಳಿದು ಕೊಳ್ಳಬಹುದಾಗಿದೆ. ಇದನ್ನು ಆಸ್ಟ್ರೇಲಿಯಾದ ಮೀಡಿಯಸ್ ಹೆಲ್ತ್ ಸಿಇಒ ಅಭಿ ಭಾಟಿಯಾ ಮತ್ತು ಅಮೆರಿಕದ ಅಗಸ್ಟಾ ವಿವಿಯ ಎಸ್.ಆರ್. ಶ್ರೀನಿವಾಸರಾವ್ ಅಭಿವೃದ್ಧಿ ಪಡಿಸಿದ್ದು, ಕೆಲವೊಂದು ಪ್ರಶ್ನೆಗಳನ್ನು ಆ್ಯಪ್ ಮೂಲಕ ಕೇಳಲಾಗುತ್ತದೆ. ಆ ಉತ್ತರಗಳನ್ನು ಆಧರಿಸಿ ಕೊರೊನಾ ವೈರಸ್ ತಗುಲಿರುವ ಸಾಧ್ಯತೆ ಬಗ್ಗೆ ಮಾಹಿತಿ ನೀಡಲಾಗುತ್ತದೆ.
ಕೊರೋನಾ ವೈರಸ್ ಗೆ ಲಸಿಕೆಯೊಂದನ್ನು ಅಭಿವೃದ್ಧಿ ಪಡಿಸಿರುವ ಇಸ್ರೇಲ್ ವಿಜ್ಞಾನಿಗಳು
ಇಸ್ರೇಲ್‌ನ ಇನ್‌ಸ್ಟಿಟೂಟ್ ಫಾರ್ ಬಯಾಲಜಿಕಲ್ ರಿಸರ್ಚ್‌ನ ವಿಜ್ಞಾನಿಗಳು ಕೊರೊನಾ ವೈರಸ್ ಗೆ ಲಸಿಕೆ ಅಭಿವೃದ್ಧಿಪಡಿಸಿದೆ ಎಂದು ಹೇಳಿಕೊಂಡಿದ್ದು, ಶೀಘ್ರವೇ ಇದನ್ನು ಅಧಿಕೃತವಾಗಿ ಪ್ರಕಟಿಸಲಾಗುವುದು ಎಂದಿದ್ದಾರೆ









