ನವದೆಹಲಿ : ದೇಶದಲ್ಲಿ ಕೊರೊನಾ ಸ್ಫೋಟ ಮುಂದುವರಿದಿದ್ದು, ಇದಕ್ಕೆ ಕಡಿವಾಣ ಹಾಕಲು ಪ್ರಧಾನಿ ನರೇಂದ್ರ ಮೋದಿ ಮತ್ತೆ ಲಾಕ್ ಡೌನ್ ಮಾಡುವ ಬಗ್ಗೆ ಪ್ರಸ್ತಾಪಿಸಿದ್ದಾರೆ.
ಬುಧವಾರ ಪ್ರಧಾನಿಗಳು ಕೊರೊನಾ ಸೋಂಕು ಹೆಚ್ಚಿರುವ ರಾಜ್ಯಗಳಾದ ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ನವದೆಹಲಿ, ಉತ್ತರ ಪ್ರದೇಶ, ಪಂಜಾಬ್ ಸೇರಿದಂತೆ ಒಟ್ಟು ಏಳು ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿದರು.
ಈ ವೇಳೆ ಪ್ರಧಾನಿಗಳು ಮುಖ್ಯಮಂತ್ರಿಗಳ ಬಳಿ ಲಾಕ್ ಡೌನ್ ಬಗ್ಗೆ ಪ್ರಸ್ತಾಪ ಮಾಡಿ ಸಲಹೆ ಕೇಳಿದ್ದಾರೆ.
ಒಂದು ಅಥವಾ 2 ದಿನ ಲಾಕ್ ಡೌನ್ ಮಾಡಿದ್ರೆ ಹೇಗೆ? ಪರಿಣಾಮಕಾರಿಯಾಗುತ್ತಾ ಈ ಬಗ್ಗೆ ಸರ್ಕಾರಗಳು ಪರಾಮರ್ಶೆ ನಡೆಸಬೇಕು ಎಂದು ಸಲಹೆ ನೀಡಿದ್ದಾರೆ.
ಒಂದು ವೇಳೆ ಲಾಕ್ ಡೌನ್ ಜಾರಿ ಮಾಡಿದರೆ ಆರ್ಥಿಕತೆಗೆ ಪೆಟ್ಟು ಬೀಳದಂತೆ ನೋಡಿಕೊಳ್ಳಬೇಕು. ಮುಂದಿನ 7 ದಿನ ಸಿಎಂಗಳು ಜಿಲ್ಲೆ ಮತ್ತು ತಾಲೂಕು ಮಟ್ಟದಲ್ಲಿ ಸಭೆ ನಡೆಸಬೇಕೆಂದು ಸೂಚಿಸಿದ್ದಾರೆ.
ರಾಜ್ಯದಲ್ಲಿ ಪ್ರತಿದಿನ ಕೊರೊನಾ ಸ್ಫೋಟವಾಗುತ್ತಲೇ ಇದೆ. ಹೀಗಾಗಿ ಮೋದಿ ಸೂಚನೆಯಂತೆ ಸೋಂಕಿತರ ಸಂಖ್ಯೆ ಹೆಚ್ಚಾದರೇ ರಾಜ್ಯದಲ್ಲೂ ಎರಡು ದಿನ ಲಾಕ್ ಡೌನ್ ಮಾಡಬಹುದು. ಅಂದರೆ ಶನಿವಾರ, ಭಾನುವಾರ ಲಾಕ್ ಡೌನ್ ಮಾಡಬಹುದು.








