ಐಪಿಎಲ್ ನಲ್ಲಿ ಕ್ಯಾಚ್ ಡ್ರಾಪ್ ಮಾಡುವುದರಲ್ಲಿ ವಿರಾಟ್ ಕೊಹ್ಲಿ ಗೆ ಅಗ್ರ ಸ್ಥಾನ
ವಿರಾಟ್ ಕೊಹ್ಲಿ.. ವಿಶ್ವ ಕ್ರಿಕೆಟ್ ನ ಶ್ರೇಷ್ಠ ಬ್ಯಾಟ್ಸ್ ಮೆನ್. ಟೀಮ್ ಇಂಡಿಯಾದ ಯಶಸ್ವಿ ನಾಯಕ.. ಫಿಟ್ ನೆಸ್ ನಲ್ಲಿ ವಿಶ್ವದ ಶ್ರೇಷ್ಠ ಅಥ್ಲೀಟ್ ಗಳ ಸಾಲಿನಲ್ಲಿ ಮುಂಚೂಣಿಯಲ್ಲಿರುವ ಕ್ರೀಡಾಪಟು. ಮೈದಾನದಲ್ಲಿ ಚುರುಕಿನ ಫೀಲ್ಡಿಂಗ್ ಮೂಲಕವೂ ಗಮನ ಸೆಳೆಯುತ್ತಿರುವ ಆಟಗಾರ.
ಆದ್ರೆ ಐಪಿಎಲ್ ನಲ್ಲಿ ಮಾತ್ರ ವಿರಾಟ್ ಕೊಹ್ಲಿ ಮಂಕಾಗುತ್ತಿದ್ದಾರೆ. ಕಳೆದ 13 ವರ್ಷಗಳಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡುತ್ತಿದ್ದಾರೆ. ಆದ್ರೆ ಒಮ್ಮೆಯೂ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಲಿಲ್ಲ. ಸದ್ಯದ ಐಪಿಎಲ್ ನಲ್ಲೂ ನಿರೀಕ್ಷಿತ ಮಟ್ಟದ ಪ್ರದರ್ಶನ ನೀಡಲಿಲ್ಲ. ನಾಯಕನಾಗಿಯೂ ತಂಡವನ್ನು ಹೇಳಿಕೊಳ್ಳುವಂತಹ ಮಟ್ಟದಲ್ಲಿ ಮುನ್ನೆಡೆಸುತ್ತಿಲ್ಲ. ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಎರಡು ಕ್ಯಾಚ್ ಗಳನ್ನು ಡ್ರಾಪ್ ಮಾಡಿದ್ದಾರೆ. ಕೆ.ಎಲ್. ರಾಹುಲ್ ಅವರ ಬ್ಯಾಟಿಂಗ್ ವೈಖರಿಯನ್ನು ಕಣ್ಣಾರೆ ನೋಡುತ್ತಿದ್ದ ವಿರಾಟ್ ಕೊಹ್ಲಿ ಒತ್ತಡಕ್ಕೆ ಸಿಲುಕಿದಂತೆ ಕಾಣುತ್ತಿತ್ತು.
ಅದೇನೇ ಇರಲಿ, ವಿರಾಟ್ ಕೊಹ್ಲಿ ಐಪಿಎಲ್ ನಲ್ಲಿ ರನ್ ದಾಖಲಿಸಿರಬಹುದು. ಆದ್ರೆ ಕೊಹ್ಲಿ ಐಪಿಎಲ್ ನ ಕೆಟ್ಟ ಫೀಲ್ಡರ್ ಅಂದ್ರೆ ಅಚ್ಚರಿಯಾಗಬಹುದು. ಹೌದು, ಕಳೆದ ಆರು ಋತುವಿನ ಪ್ರದರ್ಶನವನ್ನು ನೋಡಿದಾಗ ವಿರಾಟ್ ಕೊಹ್ಲಿ ಅತೀ ಹೆಚ್ಚು ಕ್ಯಾಚ್ ಗಳನ್ನು ಕೈ ಚೆಲ್ಲಿದ್ದಾರೆ.
ಅಂಕಿ ಅಂಶಗಳ ಪ್ರಕಾರ ವಿರಾಟ್ ಕೊಹ್ಲಿ ಕಳೆದ ಆರು ಐಪಿಎಲ್ ನಲ್ಲಿ ಒಟ್ಟು 15 ಕ್ಯಾಚ್ ಗಳನ್ನು ಡ್ರಾಪ್ ಮಾಡಿದ್ದಾರೆ. ಹೀಗೆ ಅತೀ ಹೆಚ್ಚು ಕ್ಯಾಚ್ ಡ್ರಾಪ್ ಮಾಡಿರುವ ಆಟಗಾರ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಅಗ್ರ ಸ್ಥಾನದಲ್ಲಿದ್ದಾರೆ.
ಇನ್ನು ರವೀಂದ್ರ ಜಡೇಜಾ. ಅದ್ಭುತ ಫೀಲ್ಡರ್. ಆಲ್ ರೌಂಡರ್. ಬ್ಯಾಟಿಂಗ್, ಬೌಲಿಂಗ್‍ಗಿಂತಲೂ ರವೀಂದ್ರ ಜಡೇಜಾ ಹೆಚ್ಚು ಗಮನ ಸೆಳೆದಿರುವುದು ಫೀಲ್ಡಿಂಗ್ ಮೂಲಕ. ಆದ್ರೆ ರವೀಂದ್ರ ಜಡೇಜಾ ಐಪಿಎಲ್ ನಲ್ಲಿ ಕ್ಯಾಚ್ ಡ್ರಾಪ್ ಮಾಡಿದವರ ಸಾಲಿನಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ರವೀಂದ್ರ ಜಡೇಜಾ ಒಟ್ಟು 14 ಕ್ಯಾಚ್ ಗಳನ್ನು ಡ್ರಾಪ್ ಮಾಡಿದ್ದಾರೆ.
ಇನ್ನುಳಿದಂತೆ ರಾಬಿನ್ ಉತ್ತಪ್ಪ 12 ಕ್ಯಾಚ್ ಗಳನ್ನು ಡ್ರಾಪ್ ಮಾಡಿದ್ರೆ, ಹರ್ಭಜನ್ ಸಿಂಗ್ ಕೂಡ 12 ಕ್ಯಾಚ್ ಗಳನ್ನು ಡ್ರಾಪ್ ಮಾಡಿದ್ದಾರೆ.
ಒಟ್ಟಿನಲ್ಲಿ ಟೀಮ್ ಇಂಡಿಯಾದಲ್ಲಿ ಅಮೋಘ ಫೀಲ್ಡಿಂಗ್ ಮೂಲಕ ಗಮನ ಸೆಳೆದಿದ್ದ ವಿರಾಟ್ ಕೊಹ್ಲಿ ಮತ್ತು ರವೀಂದ್ರ ಜಡೇಜಾ ಐಪಿಎಲ್ ನಲ್ಲಿ ಕ್ಯಾಚ್ ಗಳನ್ನು ಕೈಚೆಲ್ಲುವ ಮೂಲಕ ಟೀಕೆಗೂ ಗುರಿಯಾಗುತ್ತಿದ್ದಾರೆ.








