ನಮ್ಮೂರ ತಂಡದ ವಿರುದ್ಧ ನಮ್ಮವನ ಆರ್ಭಟ.. ಸಚಿನ್ ದಾಖಲೆ ಅಳಿಸಿ ಹಾಕಿದ ರಾಹುಲ್
ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಕೆ.ಎಲ್. ರಾಹುಲ್ ಅವರ ಮನಮೋಹಕ ಶತಕದ ಮುಂದೆ ಐಪಿಎಲ್‍ನ ಮೂರು ದಾಖಲೆಗಳು ಪತನಗೊಂಡಿವೆ. ನಮ್ಮೂರ ತಂಡದ ವಿರುದ್ಧ ಸವಾರಿ ನಡೆಸಿದ್ದ ನಮ್ಮವನಾದ ರಾಹುಲ್ ಅಜೇಯ 132 ರನ್ ದಾಖಲಿಸಿದ್ದರು.
ಆರ್ ಸಿಬಿ ವಿರುದ್ಧ ಮನಬಂದಂತೆ ಬ್ಯಾಟಿಂಗ್ ನಡೆಸಿದ್ದ ಕೆ.ಎಲ್. ರಾಹುಲ್ ಕಿಂಗ್ಸ್ ಪಂಜಾಬ್ ತಂಡದ ಗೆಲುವಿನ ರೂವಾರಿಯಾದ್ರು. ನಾಯಕನಾಗಿ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದ ಕೆ.ಎಲ್. ರಾಹುಲ್ ಅವರ ನಾಯಕತ್ವ ಹಾಗೂ ಬ್ಯಾಟಿಂಗ್ ವೈಖರಿಗೆ ಕ್ರಿಕೆಟ್ ಪಂಡಿತರು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಅಂದ ಹಾಗೇ, ಕೆ.ಎಲ್. ರಾಹುಲ್, ಆರ್ ಸಿಬಿ ವಿರುದ್ಧ ಎರಡು ರನ್ ದಾಖಲಿಸುತ್ತಿದ್ದಂತೆ ಹೊಸ ದಾಖಲೆ ಬರೆದಿದ್ದಾರೆ. ಐಪಿಎಲ್ ನಲ್ಲಿ ವೇಗವಾಗಿ 2000 ರನ್ ದಾಖಲಿಸಿದ್ದ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಈ ಮೂಲಕ ಕೆ.ಎಲ್. ರಾಹುಲ್ ಅವರು ಸಚಿನ್ ದಾಖಲೆಯನ್ನು ಅಳಿಸಿ ಹಾಕಿದ್ದಾರೆ. ಎಂಟು ವರ್ಷಗಳ ಹಿಂದೆ ಸಚಿನ್ ತೆಂಡುಲ್ಕರ್ 63 ಇನಿಂಗ್ಸ್ ಗಳಲ್ಲಿ ವೇಗದ 2000 ರನ್ ದಾಖಲಿಸಿದ್ದರು. ಇದೀಗ ಕೆ.ಎಲ್. ರಾಹುಲ್ 60 ಇನಿಂಗ್ಸ್ ಗಳಲ್ಲಿ 2000 ರನ್ ಪೂರೈಸಿದ್ದಾರೆ.
ಹಾಗೇ ನಾಯಕನಾಗಿ ಗರಿಷ್ಠ ರನ್ ದಾಖಲಿಸಿದ್ದ ಗೌರವಕ್ಕೂ ಪಾತ್ರರಾಗಿದ್ದಾರೆ. ಅಜೇಯ 132 ರನ್ ಗಳಿಸಿ ನಾಯಕನಾಗಿ ಅತೀ ಹೆಚ್ಚು ರನ್ ಗಳಿಸಿದ್ದ ದಾಖಲೆ ಕೂಡ ಈಗ ರಾಹುಲ್ ಅವರ ಹೆಸರಿಗೆ ಸೇರಿಕೊಂಡಿದೆ.
ಇನ್ನು, ಕೆ.ಎಲ್. ರಾಹುಲ್ ಅವರ ಅಮೋಘ ಶತಕಕ್ಕೆ ಸಚಿನ್ ತೆಂಡುಲ್ಕರ್, ರೋಹಿತ್ ಶರ್ಮಾ, ಶ್ರೀಕಾಂತ್, ಡರೇನ್ ಸಮಿ, ಇಯಾನ್ ಬಿಷಪ್, ದೀಪ್ ದಾಸ್‍ಗುಪ್ತಾ, ಆಕಾಶ್ ಚೋಪ್ರಾ ಟ್ವಿಟರ್ ನಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.








