ಬೆಂಗಳೂರು: ರೈತ ವಿರೋಧಿ ಭೂಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆಗಳ ವಿರುದ್ಧ ನಾನು ಹೋರಾಟ ಮಾಡಿದ್ದೇನೆ. ಸರ್ಕಾರದ ವಿರುದ್ಧ ಹೋರಾಟ ಮಾಡಿ ಸಾಕಾಗಿ ಹೋಗಿದೆ. ಹಾಗಂತ ನಾನೇನು ಶಸ್ತ್ರತ್ಯಾಗ ಮಾಡಿಲ್ಲ ಅಂತ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ನೀಡಿರುವ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಬೆಂಗಳೂರಿನಲ್ಲಿ ಮಾತನಾಡಿರುವ ಕುಮಾರಸ್ವಾಮಿ, ಎಪಿಎಂಪಿ ಕಾಯ್ದೆ ವಿರುದ್ಧ ಜೆಡಿಎಸ್ ಈಗಾಗಲೇ ಹೋರಾಟ ಮಾಡಿದೆ. ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ನಾವು ಪ್ರತಿಭಟನೆ ಮಾಡಿದ್ದೇವೆ. ಆದರೆ, ಆತುರವಾಗಿ ಈ ಕಾಯ್ದೆಗೆ ಸುಗ್ರೀವಾಜ್ಞೆ ತರುವ ಅಗತ್ಯವೇನಿತ್ತು ಎಂದು ಪ್ರಶ್ನಿಸಿದ್ದಾರೆ.
ಈ ಕಾಯ್ದೆಯಿಂದ ರೈತರಿಗೆ ಹೇಗೆ ಅನುಕೂಲ ಆಗುತ್ತೆ, ಯಾವ ಉದ್ದೇಶದಿಂದ ತಿದ್ದುಪಡಿ ಕಾಯ್ದೆ ತರುತ್ತಿದ್ದೇವೆ ಎಂಬುದನ್ನು ರಾಜ್ಯ ಸರ್ಕಾರ ರೈತರು ಹಾಗೂ ಶಾಸಕರ ಜತೆ ಚರ್ಚೆ ಮಾಡಬೇಕಿತ್ತು. ಆದರೆ, ಯಾವುದೇ ಚರ್ಚೆ ಮಾಡದೆ ಮಸೂದೆ ಜಾರಿಗೆ ಮುಂದಾಗಿದೆ. ಹೀಗಾಗಿ ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿಯಬೇಕು ಎಂದು ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್ ನಿನ್ನೆ ಅವಿಶ್ವಾಸ ನಿರ್ಣಯ ಮಂಡಿಸಿದೆ. ಅವಿಶ್ವಾಸ ನಿರ್ಣಯಕ್ಕೆ ಬೆಂಬಲ ನೀಡುವಂತೆ ಜೆಡಿಎಸ್ ಜತೆ ಕಾಂಗ್ರೆಸ್‍ನ ಯಾರೊಬ್ಬರೂ ಚರ್ಚೆ ಮಾಡಿಲ್ಲ. ಅವರ ದಾರಿ ಅವರಿಗೆ ಇದ್ದಂತೆ ಕಾಣುತ್ತಿದ್ದು, ಅವರಿಗೆ ನಮ್ಮ ಬೆಂಬಲ ಬೇಕಿಲ್ಲ ಅನ್ನಿಸಿರಬಹುದು. ಹೀಗಾಗಿ ಕಾಂಗ್ರೆಸ್ ಸ್ವತಂತ್ರವಾಗಿ ಸರ್ಕಾರದ ವಿರುದ್ಧ ಹೋರಾಟ ನಡೆಸಲು ಮುಂದಾಗಿದೆ ಎಂದು ಹೆಚ್‍ಡಿಕೆ ಟಾಂಗ್ ನೀಡಿದ್ದಾರೆ.








