ಜೂನ್ 4, 1946ರಲ್ಲಿ ಆಂಧ್ರಪ್ರದೇಶ ಚಿತ್ತೂರಿನ ಕೊನೇಟಮ್ಮಪೇಟಾ ಎಂಬಲ್ಲಿನ ಸಂಪ್ರದಾಯಸ್ಥ ಕುಟುಂಬವೊಂದರಲ್ಲಿ ಎಸ್.ಪಿ. ಬಾಲಸುಬ್ರಮಣ್ಯಂ ಜನಿಸಿದರು. ಅವರ ಸಂಪೂರ್ಣ ಹೆಸರು ಶ್ರೀಪತಿ ಪಂಡಿತಾರಾಧ್ಯುಲ ಬಾಲಸುಬ್ರಹ್ಮಣ್ಯಂ. ತಂದೆ ಎಸ್.ಪಿ.ಸಾಂಬಮೂರ್ತಿ ಹರಿಕಥೆ ಕಲಾವಿದರು. ಸಂಗೀತ ಕಲಿಯಲು ಬಾಲಸುಬ್ರಹ್ಮಣ್ಯಂ ಅವರಿಗೆ ಅವರ ತಂದೆಯೇ ಪ್ರೇರಣೆ. ಅವರು ತಮ್ಮಷ್ಟಕ್ಕೆ ತಾವು ಹಾರ್ಮೋನಿಯಂ, ಕೊಳಲುಗಳನ್ನು ನುಡಿಸುತ್ತಾ, ಹಾಡುತ್ತಾ ಸಂಗೀತ ಲೋಕದ ಮೇರು ಪರ್ವತವೇ ಆದರು. ತನ್ನ ಆಪ್ತವಲಯದಿಂದ ಬಾಲು ಎಂದೇ ಕರೆಯಿಸಿಕೊಳ್ಳುತ್ತಿದ್ದ ಎಸ್.ಪಿಬಿ ಪ್ರಸಿದ್ಧಿ ಪಡೆದ ನಂತರ ಶಾಸ್ತ್ರೀಯ ಸಂಗೀತವನ್ನು ಅಭ್ಯಾಸ ಮಾಡಿದರು.

1966ರಲ್ಲಿ ಘಂಟಸಾಲಾ ಮತ್ತು ಎಸ್.ಪಿ. ಕೋದಂಡಪಾಣಿ ತೀರ್ಪುಗಾರರಾಗಿದ್ದ ಸಂಗೀತ ಸ್ಪರ್ಧೆಯಲ್ಲಿ ಎಸ್.ಪಿ.ಬಿ, ವಿಜೇತರಾದರು ಅಷ್ಟೇ ಅಲ್ಲ ಇಬ್ಬರ ಮೆಚ್ಚುಗೆಗೂ ಪಾತ್ರರಾದರು. ನಂತರ ಕೋದಂಡಪಾಣಿಯವರ ತೆಲುಗು ಚಿತ್ರ ‘ಶ್ರೀ ಶ್ರೀ ಶ್ರೀ ಮರ್ಯಾದಾ ರಾಮಣ್ಣ’ದಲ್ಲಿ ಹಾಡಲು ಎಸ್.ಪಿ.ಬಿ ಅವರಿಗೆ ಅವಕಾಶ ಕೂಡ ದೊರೆಯಿತು. ಅಲ್ಲಿಂದ ಪ್ರಾರಂಭವಾದ ಎಸ್.ಪಿ.ಬಿ ಸಂಗೀತ ಪಯಣ ಇಡೀ ಭಾರತವನ್ನು ವ್ಯಾಪಿಸಿತು. ಆಗ ತೆಲುಗಿನಲ್ಲಿ ಘಂಟಸಾಲ ಸಾರ್ವಭೌಮರಾಗಿದ್ದರೆ, ತಮಿಳಿನಲ್ಲಿ ಟಿ ಎಂ ಸೌಂದರ್ ರಾಜನ್, ಕನ್ನಡದಲ್ಲಿ ಪಿ ಬಿ ಶ್ರೀನಿವಾಸ್ ಹೀಗೆ ಒಂದೊಂದು ಭಾಷೆಯ ಚಿತ್ರರಂಗದಲ್ಲಿ ಒಬ್ಬೊಬ್ಬರು ಸಾರ್ವಭೌಮರಿದ್ದರು. ಬಾಲಸುಬ್ರಹ್ಮಣ್ಯಂ ಚಿತ್ರರಂಗಕ್ಕೆ ಬಂದ ಮೇಲೆ ಈ ಎಲ್ಲಾ ಭಾಷೆಗಳಿಗೂ ಅವರೇ ಸಾರ್ವಭೌಮರಾಗಿಬಿಟ್ಟರು.
ಸ್ವರ ಯಾನದ ಸಾಧನೆಗಳ ಮಹಾಸಾಗರ ಎಸ್.ಪಿ.ಬಿ ಎಂಬ ದೈತ್ಯ ಗಾಯಕ
ಎಸ್.ಪಿ.ಬಿ ಒಂದೇ ದಿನದಲ್ಲಿ ಕನ್ನಡದಲ್ಲಿ 17 ಹಾಡು, ತಮಿಳು ತೆಲುಗಿನಲ್ಲಿ ಒಂದೇ ದಿನದಲ್ಲಿ 19 ಹಾಡು, ಹಿಂದಿಯಲ್ಲಿ ಒಂದೇ ದಿನ 16 ಹಾಡುಗಳನ್ನು ರೆಕಾರ್ಡ್ ಮಾಡಿದ ಪ್ಲೇ ಬ್ಯಾಕ್ ಸಿಂಗರ್ ಇದು ಅವರ ಸಾಮರ್ಥ್ಯ ಮತ್ತು ಅವರಿಗಿದ್ದ ಬೇಡಿಕೆಗೆ ನಿದರ್ಶನವಾಗಿದೆ. ನಾನು ಯಾರ ಬಳಿಯೂ ಸಂಗೀತ ಕಲಿಯಲಿಲ್ಲ. ಹಾಡುವವರೆಲ್ಲಾ ನನ್ನ ಗುರುಗಳು ಎಂದು ಎಸ್.ಪಿ.ಬಿ ಹೇಳುತ್ತಿದ್ದರು. ಎಲ್ಲಿಂದನೋ ಬಂದವನು ನಾನು. ನನಗೆ ಕನ್ನಡ ಗೊತ್ತಿರಲಿಲ್ಲ. ನಕ್ಕರೆ ಅದುವೇ ಸ್ವರ್ಗ ಸಿನಿಮಾ ಹಾಡುವಾಗ ಸಂಗೀತ ನಿರ್ದೇಶಕ ಕನ್ನಡ ಹೇಳಿಕೊಡ್ತೀವಿ ಎಂದು ಹೇಳಿದರು. ಅಲ್ಲಿಂದ ಬದುಕಲ್ಲಿ ಇಷ್ಟು ದೂರದವರೆಗೆ ಬರುತ್ತೇನೆ ಎಂದು ಅಂದುಕೊಂಡಿರಲಿಲ್ಲ ಎಂದು ಹೇಳುತ್ತಿದ್ದರು.

ಏಕ್ ದೂಜೇ ಕೆ ಲಿಯೇ ಚಲನಚಿತ್ರದ ಮೂಲಕ ಹಿಂದಿ ಚಿತ್ರರಂಗವನ್ನೂ ತಮ್ಮ ಮೋಡಿಗೆ ಸೆಳೆದುಕೊಂಡ ಸಂಗೀತ ದಿಗ್ಗಜ ರಫಿ, ಕಿಶೋರ್ ಅವರನ್ನು ಕಳೆದುಕೊಂಡು ಅನಾಥವಾಗಿದ್ದ ಹಿಂದಿ ಚಿತ್ರರಂಗಕ್ಕೆ ಶಕ್ತಿ ತುಂಬಿದರು. ಸಾಜನ್, ಮೈ ನೇ ಪ್ಯಾರ್ ಕಿಯಾ ಮುಂತಾದ ಚಿತ್ರಗಳ ಹಾಡಿನ ಮೂಲಕ ಜನರನ್ನು ಮೋಡಿ ಮಾಡಿದರು.
ದಕ್ಷಿಣ ಭಾರತದ ರಜನೀಕಾಂತ್, ಕಮಲಹಾಸನ್, ಚಿರಂಜೀವಿ ಹೀಗೆ ಎಪ್ಪತ್ತು ಎಂಭತ್ತರ ದಶಕದಿಂದ ಎರಡು ಸಾವಿರದ ದಶಕದವರೆಗಿನ ಬಹುತೇಕ ಹೀರೋಗಳ ಅಂತರ್ಧ್ವನಿ ಶಕ್ತಿಯೇ ಎಸ್ ಪಿ ಬಿ ಆಗಿದ್ದರು. ರಾಷ್ಟ್ರ ಪ್ರಶಸ್ತಿ , ಪದ್ಮಶ್ರೀ, ಪದ್ಮಭೂಷಣ, ಹಲವು ಡಾಕ್ಟರೇಟ್ ಪದವಿಗಳು, ಸಾವಿರಾರು ಇನ್ನಿತರ ಗೌರವ ಪ್ರಶಸ್ತಿಗಳು ಅವರನ್ನು ಹುಡುಕಿಕೊಂಡು ಬಂದಿವೆ. ಗಾಯಕರಾಗಿ, ಸಂಗೀತ ನಿರ್ದೇಶಕರಾಗಿ, ನಟರಾಗಿ, ನಿರ್ಮಾಪಕರಾಗಿ ಚಲನಚಿತ್ರರಂಗದಲ್ಲಿ ಬಾಲಸುಬ್ರಹ್ಮಣ್ಯಂ ಅವರ ಸಾಧನೆ ಅಪಾರ.








