ಕೋಟ್ಯಂತರ ಅಭಿಮಾನಿಗಳ ಪಾರ್ಥನೆ ಕೊನೆಗೂ ಫಲಿಸಲೇ ಇಲ್ಲ.. ದಶಕಗಳ ಕಾಲ ಸಂಗೀತ ಸಾಮ್ರಾಜ್ಯವನ್ನಾಳಿದ ಗಾನ ಗಾರುಡಿ ಇನ್ನು ನೆನಪು ಮಾತ್ರ.
ಚೆನ್ನೈನ ಎಂಜಿಎಂ ಆಸ್ಪತ್ರೆಯಲ್ಲಿ ಖ್ಯಾತ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರು ಕೊನೆಯುಸಿರೆಳೆದಿದ್ದಾರೆ. ಅವರು ಇಂದು ನಮ್ಮೆಲ್ಲ ಅಗಲಿ ಹೊರಡಿರಬಹುದು, ಆದ್ರೆ ಸಂಗೀತದ ಮೂಲಕ ಎಸ್ ಪಿಬಿ ಎಂದಿಗೂ ನಮ್ಮ ಜೊತೆಯಲ್ಲೇ ಇರುತ್ತಾರೆ.
ಪ್ರತಿ ಹಾಡಿಗೂ ತಮ್ಮ ಅಮೃತ ಧ್ವನಿ ಮೂಲಕ ಜೀವ ತುಂಬುತ್ತಿದ್ದ ಎಸ್ ಪಿಬಿ ಹಾಡುಗಾರಿಕೆಗೆ ಮನಸೋಲದವರೇ ಇಲ್ಲ. ಅದರಲ್ಲೂ ಕನ್ನಡಿಗರಿಗೆ ಬಾಲು ಅಂದ್ರೆ ಹುಚ್ಚು ಪ್ರೀತಿ. ಅವರು ಕನ್ನಡದವರಲ್ಲದಿದ್ದರೂ ಸಂಗೀತದ ಮೂಲಕ ಕರುನಾಡ ಸೇವೆ ಮಾಡಿದ್ದಾರೆ. ಹೀಗಾಗಿಯೇ ಕನ್ನಡಿಗರು ಎಸ್ ಪಿಬಿ ಅವರನ್ನು ಅಪ್ಪಿತಬ್ಬಿಕೊಂಡಿದ್ದಾರೆ.
ಸ್ವರ ಯಾನದ ಸಾಧನೆಗಳ ಮಹಾಸಾಗರ ಎಸ್.ಪಿ.ಬಿ ಎಂಬ ದೈತ್ಯ ಗಾಯಕ
ಇದು ಬಾಲು ಅವರಿಗೂ ಗೊತ್ತಿತ್ತು. ಇದನ್ನು ಹಲವು ಬಾರಿ ಅನೇಕ ಸಂದರ್ಭದಲ್ಲಿ ಹೇಳಿಕೊಂಡಿದ್ದಾರೆ. ಅದರಲ್ಲೂ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರಿಗೆ ಕನ್ನಡ ಅಂದರೆ ಅದೇನೋ ಪ್ರೀತಿ. ಆಂಧ್ರದಲ್ಲಿ ಹುಟ್ಟಿ ಬೆಳೆದರೂ, ನಾನು ಹಿನ್ನೆಲೆ ಗಾಯಕನಾಗಿ ಹಾಡಿದ ಎರಡನೇ ಹಾಡೇ ಕನ್ನಡದಲ್ಲಿ. ಅಲ್ಲಿಂದ ಪ್ರಾರಂಭವಾದ ಈ ಪಯಣ ಇಲ್ಲಿಯವರೆಗೂ ಬಂದಿದೆ. ಕನ್ನಡಿಗರು ನೀಡಿದ ಪ್ರೀತಿ, ವಾತ್ಸಲ್ಯ ನನಗೆ ಬೇರೆ ಯಾರಿಂದಲೂ ಸಿಕ್ಕಿಲ್ಲ. ಮುಂದಿನ ಜನ್ಮದಲ್ಲಿ ನಾನು ಕನ್ನಡ ನಾಡಿನಲ್ಲಿ ಹುಟ್ಟಲು ಇಷ್ಟಪಡುತ್ತೇನೆ ಎಂದು ಎಸ್.ಪಿ.ಬಿ ಸಾಕಷ್ಟು ಬಾರಿ ಹೇಳಿದ್ದರು.
ಕನ್ನಡ ಭಾಷೆ, ನೆಲ, ಜಲ ವಿಚಾರದ ಹಾಡುಗಳು ಕನ್ನಡಿಗರ ಮನದಲ್ಲಿ ಎಂದೆಂದಿಗೂ ನೆನಪಿನ ಬುತ್ತಿಯಲ್ಲಿರುತ್ತವೆ. ಕನ್ನಡ ನಾಡಿನ ಬಗ್ಗೆ ಎದೆ ತುಂಬಿ ಹಾಡಿರುವ ಎಸ್ ಪಿಬಿಯ ಸ್ವರವನ್ನು ಕೇಳಿದಾಗ ಒಂದು ಕ್ಷಣ ರೋಮಾಂಚನಗೊಳ್ಳುವಂತೆ ಮಾಡುತ್ತೆ.








