ಗಾನ ಕೋಗಿಲೆ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ನಿಧನಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸಂತಾಪ ಸೂಚಿಸಿದ್ದಾರೆ.
“ಈ ದೇಶ ಕಂಡ ದಿಗ್ಗಜ ಗಾಯಕ ಬಾಲಸುಬ್ರಹ್ಮಣ್ಯಂ ಅವರು ನಮ್ಮನ್ನು ಅಗಲಿರುವ ಸುದ್ದಿ ಕೇಳಿ ಮನಸ್ಸಿಗೆ ಬೇಸರವಾಗಿದೆ.
ಕಳೆದ ಮೂರು ದಿನಗಳಿಂದ ಒಂದಾದ ಮೇಲೊಂದರಂತೆ ಕೆಟ್ಟ ಸುದ್ದಿಗಳೇ ಬರುತ್ತಿರುವುದು ನೋವಿನ ವಿಚಾರ.
ಅವರು ಕೊರೋನಾ ಸೋಂಕಿನಿಂದ ಆಸ್ಪತ್ರೆ ಸೇರಿ 51 ದಿನಗಳು ಕಳೆದಿದ್ದು, ನಮ್ಮೆಲ್ಲರಿಗೂ ಅವರ ಆರೋಗ್ಯದ ಬಗ್ಗೆ ಚಿಂತೆ ಇತ್ತು.
ಲಕ್ಷಾಂತರ ಅಭಿಮಾನಿಗಳು ಅವರ ಚೇತರಿಕೆಗೆ ಪ್ರಾರ್ಥನೆ ಸಲ್ಲಿಸಿದ್ದರು. ಆದರೆ ಆ ಯಮ ನಿಷ್ಕರುಣಿ. ಹೀಗಾಗಿ ನಮ್ಮ ಪ್ರಾರ್ಥನೆ ಫಲಿಸಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಅಲ್ಲದೇ “ತಮ್ಮ ಸರಳತೆ, ವಿನಯತೆಯಿಂದಲೂ ಅಭಿಮಾನಿಗಳ ಮನಗೆದ್ದಿದ್ದ ಎಸ್ ಪಿಬಿ ಅವರ ನಿಧನದಿಂದ ಸಿನಿಮಾ ಸಂಗೀತ ಕ್ಷೇತ್ರದಲ್ಲಿ ಒಂದು ಅದ್ಭುತ ಯುಗವೇ ಅಂತ್ಯವಾದಂತಾಗಿದೆ.
ಅವರ ಮುಗಿಲೆತ್ತರದ ಸಾಧನೆ ಹಾಗೂ ಹಾಡುಗಳಿಂದ ಅವರು ನಮ್ಮೊಂದಿಗೆ ಸದಾ ಜೀವಂತವಾಗಿ ಇರುತ್ತಾರೆ.
ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬ ಸದಸ್ಯರು, ಅಭಿಮಾನಿಗಳಿಗೆ ಈ ಅಗಲಿಕೆ ನೋವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ” ಎಂದಿದ್ದಾರೆ.