ಕಿಲ್ಲರ್ ಕೊರೊನಾ ವೈರಸ್ ದಿನೇ ದಿನೇ ತನ್ನ ಕಬಂದ ಬಾಹುಗಳನ್ನು ವಿಶ್ವ ವ್ಯಾಪಿ ಚಾಚುತ್ತಲೇ ಇದ್ದು, ಸಾವು ನೋವುಗಳ ಸಂಖ್ಯೆ ಏರುತ್ತಲೇ ಇದೆ. ಇಲ್ಲಿವರೆಗೂ ಸುಮಾರು 140 ದೇಶಗಳಲ್ಲಿ ಕೊರೊನಾ ಹಬ್ಬಿದ್ದು, ಈ ವೈರಸ್ಗೆ ಈವರೆಗೂ 5000ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ ಎಂದು ವರದಿಗಳು ತಿಳಿಸಿವೆ. ಅಲ್ಲದೆ ಜಾಗತಿಕವಾಗಿ 1.40 ಲಕ್ಷಕ್ಕೂ ಅಧಿಕ ಮಂದಿಗೆ ಕೊರಾನಾ ಸೋಂಕು ತಗುಲಿದ್ದು, ಹಲವರ ಸ್ಥಿತಿ ವಿಷಮವಾಗಿದೆ.
ಇಟಲಿ ಮತ್ತು ಇರಾನ್ ನಲ್ಲಿ ಮರಣಮೃದಂಗ
ಜಾಗತಿಕ ಸಾಂಕ್ರಾಮಿಕ ಹೆಮ್ಮಾರಿ ಕೊರೊನಾ ಇಟಲಿ ಮತ್ತು ಇರಾನ್ ನಲ್ಲಿ ಮರಣಮೃದಂಗ ಬಾರಿಸುತ್ತಿದೆ. ದಿನದಿಂದ ದಿನಕ್ಕೆ ಸಾವಿನ ಸಂಖ್ಯೆ ಕ್ಷಿಪ್ರಗತಿಯಲ್ಲಿ ಏರುತ್ತಲೇ ಇದ್ದು, ಇಟಲಿಯಲ್ಲಿ 24 ಗಂಟೆಯಲ್ಲಿ 250ಕ್ಕೂ ಹೆಚ್ಚು ಮಂದಿಯನ್ನು ಕೊರೊನಾ ಬಲಿಪಡೆದಿದೆ. ಇದು ಅಲ್ಲಿನ ಪರಿಸ್ಥಿತಿಯ ಭೀಕರತೆಗೆ ಸಾಕ್ಷಿಯಾಗಿದೆ. ಇರಾನ್ ನಲ್ಲಿ ನಿನ್ನೆ 250 ಮಂದಿಗೆ ಈ ಸೋಂಕಿಗೆ ಪ್ರಾಣ ಒಪ್ಪಿಸಿದ್ದಾರೆ.
ಅಮೆರಿಕಾದಲ್ಲಿ ತುರ್ತುಪರಿಸ್ಥಿತಿ ಘೋಷಣೆ!
ಅಮೆರಿಕ ಮತ್ತು ಸ್ಪೈನ್ ದೇಶಗಳಲ್ಲೂ ಪರಿಸ್ಥಿತಿ ಆತಂಕಕಾರಿ ಮಟ್ಟದಲ್ಲಿ ಮುಂದುವರೆದಿದ್ದು, ಸೋಂಕು ಪೀಡಿತರ ಸಾವಿನ ಸರಣಿ ಮುಂದುವರೆದಿದೆ. ಕೊರೊನಾಗೆ ಈವರೆಗೂ ವಿಶ್ವದ ದೊಡ್ಡಣ್ಣ ಅಮೆರಿಕಾದಲ್ಲಿ 41 ಮಂದಿ ಬಲಿಯಾದ ಹಿನ್ನೆಲೆಯಲ್ಲಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತುರ್ತು ಪರಿಸ್ಥಿತಿ ಘೋಷಣೆ ಮಾಡಿದ್ದಾರೆ.
ತಗ್ಗದ ಕೊರೊನಾ ಆವಳಿ: ಜಗತ್ತು ತಲ್ಲಣ!
ವಿಶ್ವದಾದ್ಯಂತ ಕೊರೊನಾ ಸೋಂಕಿತರ ಸಂಖ್ಯೆ ಕೂಡ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಈವರೆಗೂ ವಿಶ್ವದಾದ್ಯಂತ 1,40,000 ಮಂದಿಯಲ್ಲಿ ಸೋಂಕು ಪತ್ತೆಯಾಗಿರುವುದಾಗಿ ವರದಿಗಳು ತಿಳಿಸಿವೆ. ಈ ನಡುವೆ ಭಾರತದಲ್ಲಿ ದಿನೇ ದಿನೇ ಕೊರೋನಾ ಸೋಂಕು ಪೀಡಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ದೇಶದಲ್ಲಿ ಸಾಂಕ್ರಾಮಿಕ ರೋಗ ಪೀಡಿತರ ಸಂಖ್ಯೆ 83ಕ್ಕೆ ಏರಿದೆ.









