ಬೆಂಗಳೂರು: ರಾಜ್ಯದಲ್ಲಿ ಎಲ್ಕೆಜಿಯಿಂದ ದ್ವಿತೀಯ ಪಿಯುಸಿವರೆಗೆ ಶಾಲಾ-ಕಾಲೇಜುಗಳ ಆರಂಭದ ಬಗ್ಗೆ ಸರ್ಕಾರ ಯಾವುದೇ ಆತುರದ ನಿರ್ಧಾರ ತೆಗೆದುಕೊಳ್ಳುವುದಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್ಕುಮಾರ್ ಸ್ಪಷ್ಟಪಡಿಸಿದ್ದಾರೆ.
ರಾಜ್ಯದಲ್ಲಿ ಕೊರೊನಾ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಯಾವುದೇ ಧಾವಂತಕ್ಕೆ ಬಿದ್ದು ಶಾಲೆಗಳನ್ನು ಆರಂಭಿಸುವುದಿಲ್ಲ. ಶಾಲಾ ಕಾಲೇಜು ಆರಂಭದ ಬಗ್ಗೆ ಯಾವುದೇ ದಿನಾಂಕವನ್ನೂ ನಿಗಧಿ ಮಾಡಿಲ್ಲ. ಶಾಲೆಗಳನ್ನು ಆರಂಭಿಸುವುದರ ಸಾಧಕ-ಬಾಧಕಗಳ ಬಗ್ಗೆ ಸಮಾಲೋಚನೆ ನಡೆಸಿಯೇ ಮುಂದಿನ ನಿರ್ಧಾರಕ್ಕೆ ಬರುತ್ತೇವೆ ಎಂದು ತಿಳಿಸಿದ್ದಾರೆ.
ನವೆಂಬರ್ ಅಥವಾ ಡಿಸೆಂಬರ್ನಲ್ಲಿ ಶಾಲಾ-ಕಾಲೇಜು ಆರಂಭಿಸಬೇಕಾ, ಬೇಡವಾ ಎಂಬುದರ ಬಗ್ಗೆ ಆರೋಗ್ಯ ತಜ್ಞರ ಜತೆ ಸಮಾಲೋಚನೆ ನಡೆಸಬೇಕಿದೆ. ಸದ್ಯ ನಾನು ಬೀದರ್ ಜಿಲ್ಲೆ ಪ್ರವಾಸದಲ್ಲಿದ್ದೇನೆ. ನಾಳೆ ಬೆಂಗಳೂರಿಗೆ ಬರುತ್ತಿದ್ದು, ಬಂದ ನಂತರ ಶಿಕ್ಷಣ ತಜ್ಞರು, ಶಿಕ್ಷಕ ಸಂಘಟನೆಗಳು, ಶಾಸಕರ ಹಾಗೂ ಕೊರೊನಾ ಟಾಸ್ಕ್ಪೋರ್ಸ್ನ ತಜ್ಞರ ಜೊತೆ ಸಮಾಲೋಚನೆ ನಡೆಸಲಾಗುವುದು ಎಂದರು.
ಶಾಲೆ-ಕಾಲೇಜುಗಳನ್ನು ಆರಂಭಿಸುವುದೇ ಆದರೆ ಯಾವ ತರಗತಿಗಳನ್ನು ಮೊದಲು ಆರಂಭಿಸಬಹುದು, ಒಂದು ತರಗತಿಯೋ, ಎಲ್ಲಾ ತರಗತಿಯೋ ಎಂಬುದನ್ನು ನಿರ್ಧರಿಸುತ್ತೇವೆ. ಜತೆಗೆ ನಾನು ಮಕ್ಕಳ ಪೋಷಕರ ಪೋಷಕನಾಗಿ ಅವರ ಹಿತವನ್ನು ಗಮನದಲ್ಲಿಟ್ಟುಕೊಂಡು ನಿರ್ಧಾರ ತೆಗೆದುಕೊಳ್ಳುತ್ತೇವೆ. ಈ ಕಾರಣಕ್ಕಾಗಿಯೇ ಅಭಿಪ್ರಾಯ, ಸಲಹೆ ನೀಡುವಂತೆ ಶಾಸಕರಿಗೆ ಪತ್ರ ಬರೆದಿದ್ದೇನೆ ಎಂದು ಸ್ಪಷ್ಟನೆ ನೀಡಿದರು.
ಶಾಲಾ-ಕಾಲೇಜುಗಳನ್ನು ಆರಂಭಿಸುವುದಾದರೆ ಎಷ್ಟು ದಿನಗಳ ಸಿಗಲಿದೆ ಎಂಬುದನ್ನು ನೋಡುತ್ತೇವೆ. ಎಷ್ಟು ದಿನಗಳು ಸಿಗಲಿವೆ ಎಂಬುದನ್ನು ನೋಡಿ ಪಠ್ಯಕ್ರಮ ಕಡಿತ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು.
ಮಕ್ಕಳ ಸುರಕ್ಷತೆ ಬಗ್ಗೆ ಮೊದಲು ಆದ್ಯತೆ ನೀಡುತ್ತೇವೆ. ಕೇಂದ್ರ ಸರ್ಕಾರ ಶಾಲೆಗಳನ್ನು ಆರಂಭಿಸುವ ಬಗ್ಗೆ ನೀಡುವ ಗೈಡ್ಲೈನ್ಸ್ ಆಧರಿಸಿ, ವಸ್ತುಸ್ಥಿತಿ ಪರಿಶೀಲಿಸಿ ಮುಂದಿನ ಹೆಜ್ಜೆ ಇಡುತ್ತೇವೆ ಎಂದು ಸಚಿವ ಸುರೇಶ್ ಕುಮಾರ್ ಭರವಸೆ ನೀಡಿದ್ದಾರೆ.
ಬಾಲ್ಯ ವಿವಾಹ, ಬಾಲ ಕಾರ್ಮಿಕ ಹೆಚ್ಚಳ ಭೀತಿ..!
ಶಾಲಾ-ಕಾಲೇಜುಗಳನ್ನು ಆರಂಭಿಸುವ ಬಗ್ಗೆ ವಿಳಂಬ ಮಾಡಿದಷ್ಟೂ ಗ್ರಾಮಾಂತರ ಪ್ರದೇಶದಲ್ಲಿ ಬಾಲ್ಯ ವಿವಾಹ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ಸರ್ಕಾರಕ್ಕೆ ಮಾಹಿತಿ ಬಂದಿದೆ. ಮಂಡ್ಯದ ಪಾಂಡವಪುರ, ಚಾಮರಾಜನಗ ಜಿಲ್ಲೆ ಸೇರಿದಂತೆ ಕೆಲ ಜಿಲ್ಲೆಗಳಲ್ಲಿ ಬಾಲ್ಯವಿವಾಹ ನಡೆದಿರುವ ಶಂಕೆ ವ್ಯಕ್ತವಾಗಿದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಮಾಹಿತಿ ನೀಡಿದ್ದಾರೆ.
ಜತೆಗೆ ಶಾಲೆಗಳು ಆರಂಭವಾಗುದು ತಡವಾಗುತ್ತಿರುವ ಹಿನ್ನೆಲೆಯಲ್ಲಿ ಮಕ್ಕಳು ಕೂಲಿಗೆ ಹೋಗುತ್ತಿರುವ ಪ್ರಕರಣಗಳು ಬೆಳಕಿಗೆ ಬಂದಿವೆ. ಇದರಿಂದ ಬಾಲ ಕಾರ್ಮಿಕ ಪದ್ದತಿ ಹೆಚ್ಚಳವಾಗುವ ಆತಂಕವಿದೆ. ಈ ಎಲ್ಲಾ ಆಯಾಮಗಳನ್ನು ಆಧರಿಸಿ ಕ್ರಮಕೈಗೊಳ್ಳಲು ಸಂವಾದ ನಡೆಸಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದಿದ್ದಾರೆ.








