ನವದೆಹಲಿ : ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ಮಹತ್ವದ ತೀರ್ಪು 28 ವರ್ಷಗಳ ಬಳಿಕ ಪ್ರಕಟಗೊಂಡಿದ್ದು, ಬಾಬ್ರಿ ಮಸೀದಿ ಕೆದವಿದ್ದು ಆಕಸ್ಮಿಕ. ಸಂಚು ಇಲ್ಲ ಎಂದು ಲಖನೌ ಸಿಬಿಐ ವಿಶೇಷ ನ್ಯಾಯಾಲಯ ಐತಿಹಾಸಿಕ ತೀರ್ಪು ಪ್ರಕಟಿಸಿದೆ. ಇದರೊಂದಿಗೆ ಬಿಜೆಪಿ ಭೀಷ್ಮ ಮಾಜಿ ಉಪ ಪ್ರಧಾನಿ ಎಲ್‍ಕೆ ಅಡ್ವಾಣಿ ಅವರಿಗೆ ಬಿಗ್ ರಿಲೀಫ್ ಸಿಕ್ಕಿದ್ದು ಬಾಬ್ರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಖಲಾಸೆಯಾಗಿದ್ದಾರೆ.
ಏನಿದು ಪ್ರಕರಣ..?
28 ವರ್ಷಗಳ ಬಳಿಕ ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ತೀರ್ಪು ಪ್ರಕಟಗೊಂಡಿದೆ. ಹಾಗಾದ್ರೆ ಈ ಪ್ರಕರಣ ನಡೆದಿದ್ದು ಯಾವಾಗ..? ಹೇಗೆ..? ಮುಂದೆ ಓದಿ…
ಈ ಘಟನೆ ನಡೆದಿದ್ದು, 1992ರಲ್ಲಿ. ದೇಶದ ವಿವಿಧ ಮೂಲೆಗಳಿಂದ ಅಯೋಧ್ಯೆಗೆ ಆಗಮಿಸಿದ್ದ ಕರಸೇವಕರು ಡಿಸೆಂಬರ್ 6ರಂದು, ಬಾಬ್ರಿ ಮಸೀದಿಯನ್ನು ಕೆಡವಿ ರಾಮಮಂದಿರ ಅಡಿಪಾಯಕ್ಕೆ ಮುಂದಾಗಿದ್ರು.
ಇದನ್ನೂ ಓದಿ : ಮಹತ್ವದ ತೀರ್ಪನ್ನು ಪೂರ್ಣ ಹೃದಯದಿಂದ ಸ್ವಾಗತಿಸಿದ್ದೇನೆ – ಎಲ್.ಕೆ.ಅಡ್ವಾಣಿ
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಲಖನೌ ಮತ್ತು ರಾಯಬರೇಲಿಯಲ್ಲಿ ಎರಡು ಪ್ರತ್ಯೇಕ ದೂರುಗಳು ದಾಖಲಾಗಿದ್ದವು. ಮೊದಲ ದೂರಿನಲ್ಲಿ ಕರಸೇವಕರ ವಿರುದ್ಧ ಹಾಗೂ ಮತ್ತೊಂದರಲ್ಲಿ ಕೆ.ಆಡ್ವಾಣಿ, ಡಾ.ಮುರಳಿ ಮನೋಹರ ಜೋಶಿ, ಉಮಾ ಭಾರತಿ, ಕಲ್ಯಾಣ್ ಸಿಂಗ್, ನೃತ್ಯ ಗೋಪಾಲ ದಾಸ್, ಸತೀಶ್ ಪ್ರಧಾನ್, ವಿನಯ್ ಕಟಿಯಾರ್, ಚಂಪತ್ ರಾಯ್, ಸಾಕ್ಷಿ ಮಹಾರಾಜ್, ಸಾಧ್ವಿ ರಿತಂಬರಾ, ಆಚಾರ್ಯ ಧಮೇರ್ಂದ್ರ ದೇವ್, ಜೈ ಭಗವಾನ್ ಗೋಯಲ್
ಹೀಗೆ ಪ್ರಮುಖ ನಾಯಕರ ವಿರುದ್ಧ ದೂರು ದಾಖಲಾಗಿತ್ತು. ಇದರಲ್ಲಿ ಅಂದಿನ ಉತ್ತರ ಪ್ರದೇಶದ ಮುಖ್ಯಮಂತ್ರಿ ಬಿಜೆಪಿಯ ಕಲ್ಯಾಣ್ ಸಿಂಗ್ ಕೂಡ ಆರೋಪಿಯಾಗಿದ್ದರು.
ಮೊದಲು ವಿಚಾರಣೆ ನಡೆಸಿದ್ದ ಅಧೀನ ನ್ಯಾಯಾಲಯ 2001ರಲ್ಲಿ ಗಂಭೀರ ಅಪರಾಧ ಪಿತೂರಿ ಆರೋಪವನ್ನು ಕೈಬಿಟ್ಟಿತ್ತು. 2010ರಲ್ಲಿಅಲಹಾಬಾದ್ ಹೈಕೋರ್ಟ್ ಕೂಡ ಈ ತೀರ್ಪನ್ನು ಎತ್ತಿಹಿಡಿದಿತ್ತು. ಆದರೆ 2017ರಲ್ಲಿ ಸುಪ್ರ್ರಿಂ ಕೋರ್ಟ್ ಅವರ ವಿರುದ್ಧದ ಪಿತೂರಿ ಆರೋಪವನ್ನು ಮರುಸ್ಥಾಪಿಸಿ ವಿಚಾರಣೆ ನಡೆಸುವಂತೆ ಆದೇಶಿಸಿತು. ಆರೋಪಿಗಳು ಮಸೀದಿಯನ್ನು ಧ್ವಂಸಗೊಳಿಸಲು ಪಿತೂರಿ ನಡೆಸಿ, ಕರಸೇವಕರಿಗೆ ಪ್ರಚೋದಿಸಿದ್ದರು ಎಂದು ಸಿಬಿಐ ವಾದ ಮಂಡಿಸಿತ್ತು. ಈ ಆರೋಪವನ್ನು ತಳ್ಳಿ ಹಾಕಿದ್ದ ಆರೋಪಿಗಳು, ತಮ್ಮ ವಿರುದ್ಧದ ಆರೋಪಗಳನ್ನು ಸಾಬೀತುಪಡಿಸಲು ಯಾವುದೇ ಸಾಕ್ಷ್ಯಗಳಿಲ್ಲ. ತಮ್ಮ ವಿರುದ್ಧದ ದೋಷಾರೋಪಣೆ ಅಂದು ಅಧಿಕಾರದಲ್ಲಿದ್ದ ಕಾಂಗ್ರೆಸ್ ಸರ್ಕಾರದ ರಾಜಕೀಯ ಒಳಸಂಚು ಎಂದು ಪ್ರತಿವಾದ ಮಂಡಿಸಿದ್ದರು.
ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರಿನನ್ವಯ ಸಿಬಿಐ 351 ಸಾಕ್ಷ್ಯ ಮತ್ತು 600 ದಾಖಲೆಗಳನ್ನು ಕೋರ್ಟ್‍ಗೆ ಸಲ್ಲಿಕೆ ಮಾಡಿತ್ತು. 48 ಆರೋಪಿಗಳ ವಿರುದ್ಧ ಚಾರ್ಜ್‍ಶೀಟ್ ಸಲ್ಲಿಸಲಾಗಿತ್ತು. ಈ ಪೈಕಿ ವಿಚಾರಣೆ ಅವಧಿಯಲ್ಲಿಯೇ 17 ಮಂದಿ ನಿಧನ ಹೊಂದಿದ್ದು, 32 ಮಂದಿ ಉಳಿದಿದ್ದರು. ಅವರನ್ನು ಈಗ ಪ್ರಕರಣದಿಂದ ಖುಲಾಸೆಗೊಳಿಸಲಾಗಿದೆ.










