ಶಂಕರ್ ನಾಗ್…. ಈ ಹೆಸರು ಕೇಳಿದ್ರೇನೆ ಕನ್ನಡಿಗರು ರೊಮಾಂಚನಗೊಳ್ಳುತ್ತಾರೆ..
ಚಂದನವನದ ಅತ್ಯದ್ಭುತ ನಟ ಹಾಗೂ ನಿರ್ದೇಶಕರಾಗಿದ್ದ ಶಂಕರ್ ನಾಗ್ ಅವರು ನಮ್ಮನ್ನೆಲ್ಲ ಅಗಲಿ ಇಂದಿಗೆ 30 ವರ್ಗಳು ಕಳೆದಿವೆ. ಕೇವಲ 12 ವರ್ಷಗಳ ಕಾಲ ಸ್ಯಾಂಡಲ್ ವುಡ್ ನಲ್ಲಿ ಕೆಲಸ ಮಾಡಿದ್ರೂ ಅವರ ಸಾಧನೆ ಇನ್ನೂ ಶತಶತಮಾನಗಳ ಕಾಲ ಅಚ್ಚಳಿಯದೇ ನೆನಪಿನಲ್ಲೇ ಉಳಿಯುವಂತಹದ್ದು.
ಅಂದು 1990 – ಸೆ.30… ಆ ದಿನ ಕರುನಾಡಿನ ಪಾಲಿಗೆ, ಕನ್ನಡಿಗರ ಅದ್ರಲ್ಲೂ ಶಂಕ್ರಣ್ಣನ ಅಭಿಮಾನಿಗಳ ಪಾಲಿಗೆ ಕರಾಳದಿನ. ಶಂಕರ್ ಸರ್ ಅವರ ಕಾರಿಗೆ ಅಪಘಾತವಾದ ಸುದ್ದಿ ಕೇಳಿ ಕನ್ನಡಿಗರಷ್ಟೇ ಅಲ್ಲ ಹಹಲವು ರಾಜ್ಯಗಳಲ್ಲಿನ ಅಭಿಮಾನಗಳಲ್ಲಿ ದುಃಖದ ಮಡುವು ಹೆಪ್ಪುಗಟ್ಟಿತ್ತು. ಶಂಕರ್ ನಾಗ್ ಅವರ ನಿಧನದ ಸುದ್ದಿ ರಾಜ್ಯಾದ್ಯಂತ ಬರಸಿಡಿಲಿನಂತೆ ಅಪ್ಪಳಿಸಿತ್ತು. ಅಂದು ರಾಜ್ಯದಲ್ಲೆದೆ ಮೌನ ಆವರಿಸಿತ್ತು.. ಕೋಟ್ಯಾಂತರ ಅಭಿಮಾನಿಗಳು ದೈವಕ್ಕೆ ಶಾಪ ಹಾಕುತ್ತಾ ಕಣ್ಣೀರಿಟ್ಟಿದ್ದರು. 
ದಾವಣಗೆರೆಯ ಬಳಿಯ ಅನಗೋಡಿನಲ್ಲಿ ಶಂಕರ್ ನಾಗ್ ಅವರು ಪ್ರಯಾಣಿಸುತ್ತಿದ್ದ ಕಾರಿಗೆ ಮುಂದಿನಿಂದ ಬಂದ ಯಮರೂಪಿ ಲಾರಿ ಡಿಕ್ಕಿ ಹೊಡೆದಿತ್ತು. ಪರಿಣಾಮ ಶಂಕರ್ ನಾಗ್ ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದರು. ಆ ದಿನ ನಿಜಕ್ಕೂ ಕನ್ನಡ ಚಿತ್ರರಂಗಕ್ಕೆ ಕರಾಳ ದಿನವಾಗಿತ್ತು..
ಶಂಕರ್ ಅಣ್ಣನ ಸಾಧನೆಗೆ ಎಂಥವರೂ ಬೆರಗಾಗುತ್ತಾರೆ. ಕೇವಲ 12 ವರ್ಷದ ಅವಧಿಯಲ್ಲಿ ಶಂಕರ್ ನಾಗ್ ಅವರು 90ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿ ಇಂದಿಗೂ ತಮ್ಮ ನಟನೆಯ ಸಿನಿಮಾಗಳ ಮೂಲಕ ಅಭಿಮಾನಿಗಳ ಜೊತೆಯಲ್ಲಿ ಇದ್ದಾರೆ. ಇಂದಿಗೂ ಅವರ ಅಭಿಮಾನಿಗಳು ಅವರ ನೆನಪಿನಲ್ಲಿ ಅನೇಕ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿದ್ದಾರೆ.

1978ರಲ್ಲಿ. ‘ಒಂದಾನೊಂದು ಕಾಲದಲ್ಲಿ ‘ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಿದ “ಆಟೋರಾಜ” ಕೇವಲ ನಟನೆಯಲ್ಲಷ್ಟೇ ಅಲ್ದೇ ನಿರ್ದೇಶನದಲ್ಲೂ ಯಶಸ್ಸು ಗಳಿಸಿದ್ದವರು. ಅವರ ನಿರ್ದೇಶನದಲ್ಲಿ ಮೂಡಿಬಂದ “ಮಿಂಚಿನ ಓಟ ಚಿತ್ರ” ಶಂಕರ್ ನಾಗ್ ಅವರಿಗೆ ಅಗಮ್ಯ ಯಶಸ್ಸು , ಕೀರ್ತಿ ತಂದುಕೊಟ್ಟಿತ್ತು. ಈ ಸಿನಿಮಾಗೆ ಫಿಲ್ಮ್‌ಫೇರ್ ಪ್ರಶಸ್ತಿ ಸೇರಿದಂತೆ ಏಳು ರಾಜ್ಯ ಪ್ರಶಸ್ತಿಗಳು ಒಲಿದುಬಂದಿದ್ದವು.. ಇದಾದ ನಂತರ ಅವರು ಆಕ್ಷನ್ ಕಟ್ ಹೇಳಿದ ಒಂದೊಂದು ಚಿತ್ರವೂ ಅಷ್ಟೇ ಸಕ್ಸಸ್ ಕಂಡಿವೆ. ಶಂಕರ್ ನಿರ್ದೇಶನದ ‘ನೋಡಿ ಸ್ವಾಮಿ ನಾವಿರೋದೇ ಹೀಗೆ’, ‘ಆ್ಯಕ್ಸಿಡೆಂಟ್’ ಸಿನಿಮಾಗಳು ಈಗಲೂ ಜನರ ಫೇವರೇಟ್.. ಈ ಸಿನಿಮಾಗಳಿಗೆ ರಾಷ್ಟ್ರ ಪ್ರಶಸ್ತಿ, ರಾಜ್ಯ ಪ್ರಶಸ್ತಿಯೂ ಸಿಕ್ಕಿವೆ.
ಶಂಕರ್ ನಾಗ್ ಅವರು ಒಟ್ಟು 9 ಚಿತ್ರಗಳನ್ನ ನಿರ್ದೇಶಿಸಿದ್ದಾರೆ. ಇನ್ನೂ ಆ ಕಾಲದ ಅತ್ಯಂತ ಖ್ಯಾತ ಸಿನೆಮಾವಾದ ವರನಟ ಡಾ. ರಾಜ್ ಕುಮಾರ್ ಅವರ ನಟನೆಯ “ ಒಂದು ಮುತ್ತಿನ ಕಥೆ”ಗೂ ಶಂಕರ್ ನಾಗ್ ಅವರೇ ಆಕ್ಷನ್ ಕಟ್ ಹೇಳಿದ್ರು. ಇನ್ನೂ ಮನೆ ಮಾತಾಗಿದ್ದ ಅತ್ಯಂತ ಜನಪ್ರಿಯ ಧಾರಾವಾಹಿ ಮಾಲ್ಗುಡಿ ಡೇಸ್ ಗೂ ಶಂಕರ್ ಅವರದ್ದೇ ಡೈರೆಕ್ಷನ್ ಇತ್ತು.
ಕಡಿಮೆ ಅವಧಿಯಲ್ಲೇ ಸಾಧನೆಯ ಶಿಖರವೇರಿದ್ದ ಶಂಕರ್ ನಾಗ್ ಅವರು ಇಂದಿಗೂ , ನಾಳೆಗೂ ಎಂದಿಂದಿಗೂ ಅಜರಾಮರ.. 








