ಬೆಂಗಳೂರು: ಕೊರೊನಾ ಸೋಂಕು ಹರಡುವುದನ್ನು ತಡೆಯಲು ಕಠಿಣ ಕ್ರಮಕ್ಕೆ ಮುಂದಾಗಿರುವ ರಾಜ್ಯ ಸರ್ಕಾರ ನಾಳೆಯಿಂದ ಮನೆಯಿಂದ ಹೊರಗೆ ಬರುವವರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಇಲ್ಲವಾದರೆ ಬೆಂಗಳೂರು ನಗರ ಸೇರಿದಂತೆ ನಗರ ಪ್ರದೇಶಗಳಲ್ಲಿ 1000 ರೂ. ದಂಡ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ 500.ರೂ ದಂಡ ವಿಧಿಸಲು ರಾಜ್ಯ ಸರ್ಕಾರ ರ್ನಿಧರಿಸಿದೆ.
ಈ ಸಂಬಂಧ ಉನ್ನತಮಟ್ಟದ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್, ಸಾರ್ವಜನಿಕ ಪ್ರದೇಶಗಳಲ್ಲಿ ಮಾಸ್ಕ್ ಧರಿಸದವರಿಗೆ ವಿಧಿಸಲಾಗುತ್ತಿದ್ದ ದಂಡದ ಮೊತ್ತವನ್ನು ನಗರ ಪ್ರದೇಶಗಳಲ್ಲಿ 1000ರೂ. ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ 500ರೂ.ಗೆ ಹೆಚ್ಚಿಸಲಾಗಿದೆ. ಈ ಸಂಬಂಧ ಗುರುವಾರ ಸರ್ಕಾರದಿಂದ ಅಧಿಕೃತ ಆದೇಶ ಹೊರಬೀಳಲಿದೆ ಎಂದರು.
ಇತ್ತೀಚಿನ ದಿನಗಳಲ್ಲಿ ಮಾಸ್ಕ್ ಧರಿಸದೇ ನಿರ್ಲಕ್ಷ್ಯ ವಹಿಸುವವರ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ಈಗಿರುವ 200ರೂ. ದಂಡವನ್ನು 1000ರೂ.ಗೆ ಹೆಚ್ಚಳ ಮಾಡಲಾಗಿದೆ. ಆಯಾ ಪೊಲೀಸ್ ಠಾಣಾ ವ್ಯಾಪ್ತಿಗೆ ಗುರಿ ನಿಗದಿ ಮಾಡಿ ದಂಡ ವಸೂಲಿಗೆ ಆದೇಶ ಹೊರಬೀಳಲಿದೆ ಎಂದು ತಿಳಿಸಿದ್ದಾರೆ.
ಮದುವೆ, ಸಭೆ ಸಮಾರಂಭಗಳಿಗೆ ನಿರ್ಬಂಧ
ಕೊರೊನಾ ಹರಡುತ್ತಿರುವ ಹಿನ್ನೆಲೆಯಲ್ಲಿ ಮದುವೆ, ಸಭೆ-ಸಮಾರಂಭಗಳಿಗೆ, ಸಾಮಾಜಿಕ, ಧಾರ್ಮಿಕ ಹಾಗೂ ರಾಜಕೀಯ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಗರಿಷ್ಠ 50 ಜನರು ಮಾತ್ರ ಸೇರಲು ಅವಕಾಶ ನೀಡಲಾಗಿದೆ. ಅದಕ್ಕಿಂತ ಹೆಚ್ಚು ಜನ ಸೇರಿದರೆ ಆಯೋಜಕರು ಹಾಗೂ ಸಂಸ್ಥೆ ಮಾಲೀಕರ ವಿರುದ್ಧ ಶಿಸ್ತುಕ್ರಮ ಜರುಗಿಸಲು ಸರ್ಕಾರ ಸೂಚನೆ ನೀಡಿದೆ.
ಮಾರುಕಟ್ಟೆ, ಮಾಲ್ ಹಾಗೂ ಸಾರ್ವಜನಿಕ ಪ್ರದೇಶಗಳಲ್ಲಿ 5ಕ್ಕೂ ಹೆಚ್ಚು ಜನ ಗುಂಪುಗೂಡಿ ನಿಲ್ಲುವಂತಿಲ್ಲ. ಕೊರೊನಾ ಜಾಗೃತಿ ಸಂಬಂಧ ರಾಜಕಾರಣಿಗಳು, ಕ್ರೀಡೆ, ಸಿನಿಮಾ ತಾರೆಯರು, ಧಾರ್ಮಿಕ ಮುಖಂಡರ ಮೂಲಕ ಮಾಸ್ಕ್ ಜಾಗೃತಿ ಬಗ್ಗೆ ವಿಡಿಯೋ ಸಂದೇಶ ನೀಡಲು ಸರ್ಕಾರ ಮುಂದಾಗಿದೆ ಎಂದು ಸಚಿವ ಸುಧಾಕರ್ ಮಾಹಿತಿ ನೀಡಿದ್ದಾರೆ.
ಬಸ್ಗಳಲ್ಲಿ ಮತ್ತೆ ಶೇ.50ರ ಪ್ರಯಾಣಿಕರ ಮಿತಿ
ಸರ್ಕಾರಿ ಹಾಗೂ ಖಾಸಗಿ ಬಸ್ಗಳಲ್ಲಿ ಪ್ರಯಾಣಿಕರ ಮಿತಿಯನ್ನು ಮತ್ತೆ ಶೇ.50ಕ್ಕೆ ಸೀಮಿತಗೊಳಿಸಲಾಗಿದೆ. ಬಸ್ಗಳಲ್ಲಿ ಪ್ರಯಾಣಿಕರ ಮಿತಿ ಹೇರಿದ್ದರಿಂದ ಕೆಎಸ್ಆರ್ಟಿಸಿ ಸೇರಿದಂತೆ ಸರ್ಕಾರಿ ಸ್ವಾಮ್ಯದ ಸಾರಿಗೆ ಸಂಸ್ಥೆಗಳು ಭಾರಿ ನಷ್ಟ ಅನುಭವಿಸಿವೆ. ಈ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 1ರಿಂದ ಪ್ರಯಾಣಿಕರ ಮಿತಿಯನ್ನು ತೆಗೆದು ಹಾಕಲಾಗಿತ್ತು.
ಆದರೆ, ಕೊರೊನಾ ನಿಯಂತ್ರಣಕ್ಕೆ ಬಾರದೇ ಇರುವುದರಿಂದ ಈ ಮಿತಿಯನ್ನು ಮತ್ತೆ ಜಾರಿಗೊಳಿಸಲಾಗಿದ್ದು, ಆಸನ ಸಾಮಥ್ರ್ಯದ ಶೇ.50ರಷ್ಟು ಪ್ರಯಾಣಿಕರು ಸಂಚರಿಸಬೇಕು. ಮಾಸ್ಕ್ ಇಲ್ಲದವರು ಬಸ್ ಹತ್ತದಂತೆ ನಿರ್ವಾಹಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗುತ್ತಿದೆ.
ಸರ್ಕಾರಿ ಕಚೇರಿಗಳಲ್ಲಿ ನೌಕರರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಮಾಸ್ಕ್ ಧರಿಸದೇ ಬರುವವರಿಗೆ ಕಚೇರಿ ಪ್ರವೇಶ ಇರುವುದಿಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವರು ಖಡಕ್ ಸೂಚನೆ ನೀಡಿದ್ದಾರೆ.







