ಬಡತನದಲ್ಲಿ ಅರಳಿದ ಯಾರ್ಕರ್ ಕಿಂಗ್ ತಂಗರಸು ನಟರಾಜನ್
ತಂಗರಸು ನಟರಾಜನ್.. 29ರ ಹರೆಯದ ತಮಿಳುನಾಡು ರಣಜಿ ತಂಡದ ವೇಗಿ. ಸದ್ಯ ಐಪಿಎಲ್ ನಲ್ಲಿ ಸನ್ ರೈಸರ್ಸ್ ಹೈದ್ರಬಾದ್ ತಂಡದ ಯಾರ್ಕರ್ ಕಿಂಗ್. ಡೆತ್ ಓವರ್ ಗಳಲ್ಲಿ ತನ್ನ ಅಮೋಘ ಯಾರ್ಕರ್ ಎಸೆತಗಳ ಮೂಲಕವೇ ಬ್ಯಾಟ್ಸ್ ಮೆನ್ ಗಳನ್ನು ದಂಗುಬಡಿಸುವ ನಟರಾಜನ್ ನಡೆದ ಬಂದಿರೋದು ಕಲ್ಲು ಮುಳ್ಳಿನ ಹಾದಿಯಲ್ಲಿ.
ಹೌದು, ಬಡತನ ಏನು ಅನ್ನೋದು ನಟರಾಜನ್ ಗೆ ಚೆನ್ನಾಗಿ ಗೊತ್ತಿದೆ. ಹಾಗಂತ ಬಡತನದ ದಿನಗಳನ್ನು ನಟರಾಜನ್ ಮರೆತಿಲ್ಲ. ಒಂದು ಹೊತ್ತಿನ ಊಟಕ್ಕೂ ಅಪ್ಪ ಅಮ್ಮ ಕಷ್ಟಪಡುತ್ತಿದ್ದ ದಿನಗಳು ಕೂಡ ನಟರಾಜನ್ ಅವರಿಗೆ ನೆನಪಿದೆ.ಬಡತನದ ನೋವಿನಲ್ಲೇ ಕ್ರಿಕೆಟ್ ಆಟಗಾರನಾಗಿ ರೂಪುಗೊಂಡಿರುವ ನಟರಾಜನ್ ಅವರ ಯಶಸ್ಸಿನ ಹಿಂದೆ ಸಾಕಷ್ಟು ಪರಿಶ್ರಮ, ನೋವು, ಬದ್ಧತೆ ಅದಕ್ಕಿಂತ ಹೆಚ್ಚಾಗಿ ಕ್ರಿಕೆಟ್ ಮೇಲಿನ ಪ್ರೀತಿ ಆಗಾಧವಾಗಿದೆ.
ಅಂದ ಹಾಗೇ, ನಟರಾಜನ್ ಅವರ ಅಪ್ಪ ಕೂಲಿ ಕಾರ್ಮಿಕರಗಿದ್ದರು. ಅಮ್ಮ ರಸ್ತೆ ಬದಿಯಲ್ಲಿ ಕೋಳಿ ಮಾರಾಟ ಮಾಡುತ್ತಿದ್ದರು. ಅಪ್ಪ ಅಮ್ಮನ ದಿನ ನಿತ್ಯದ ದುಡಿಮೆಯ ಹಣದಲ್ಲೇ ಜೀವನ ಸಾಗಿಸಬೇಕಾಗಿದ್ದ ಈ ಕುಟುಂಬಕ್ಕೆ ಬೆಳಕಾಗಿದ್ದು ನಟರಾಜನ್.
ಇದೀಗ ಅಪ್ಪ ಕೂಲಿ ಕೆಲಸ ಮಾಡುತ್ತಿಲ್ಲ. ಆದ್ರೆ ಅಮ್ಮ ರಸ್ತೆ ಬದಿಯಲ್ಲೇ ಕೋಳಿ ಮಾರಾಟ ಮಾಡುತ್ತಿದ್ದಾರೆ. ಅಮ್ಮನ ವೃತ್ತಿಯನ್ನು ಬದಲಾಯಿಸಲು ನಟರಾಜನ್ಗೆ ಸಾಧ್ಯವಾಗಿಲ್ಲ. ಇನ್ನುಳಿದಂತೆ ತನಗಾಗಿ ಕಷ್ಟಪಟ್ಟು ದುಡಿದ ಅಪ್ಪ ಅಮ್ಮನಿಗೆ ಒಳ್ಳೆಯ ಮನೆ ಕಟ್ಟಿಸಿಕೊಟ್ಟಿದ್ದಾರೆ. ತನ್ನ ತಂಗಿ ಸೇರಿದಂತೆ ಒಡ ಹುಟ್ಟಿದವರಿಗೆ ಉತ್ತಮ ಶಿಕ್ಷಣ ನೀಡಲು ನೆರವಾಗುತ್ತಿದ್ದಾರೆ. ಅದೇ ರೀತಿ ತಾನು ಹುಟ್ಟಿ ಬೆಳೆದ ಊರಿನಲ್ಲಿ ಕ್ರಿಕೆಟ್ ತರಬೇತಿಗೆ ಬೇಕಾಗಿರುವಂತಹ ಸೌಲಭ್ಯಗಳನ್ನು ಕಲ್ಪಿಸಿದ್ದಾರೆ. ಇದೆಲ್ಲಾ ಆಗಿದ್ದು ಕ್ರಿಕೆಟ್ ಮತ್ತು ಐಪಿಎಲ್ ನಿಂದಾಗಿ.
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದ 14 ಮತ್ತು 18ನೇ ಓವರ್ ನಲ್ಲಿ ನಟರಾಜನ್ ಅವರು ತಮ್ಮ ಯಾರ್ಕರ್ ಎಸೆತಗಳ ಮೂಲಕವೇ ಗಮನ ಸೆಳೆದಿದ್ದರು. 4 ಓವರ್ ಗಳಲ್ಲಿ 21 ರನ್ ನೀಡಿ ಒಂದು ವಿಕೆಟ್ ಕಬಳಿಸಿದ್ದರು. ಅಲ್ಲದೆ ಮಾರ್ಕಸ್ ಸ್ಟೋನಿಸ್ ಅವರ ವಿಕೆಟ್ ಕಬಳಿಸುವ ಮೂಲಕ ತಂಡಕ್ಕೆ ಸುಲಭ ಜಯ ದೊರಕಿಸಿಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ತಮಿಳುನಾಡಿನ ಸೇಲಂ ಜಿಲ್ಲೆಯ ಚಿನ್ನಪ್ಪಂಪಟ್ಟಿ ಗ್ರಾಮದ ನಟರಾಜನ್ ಅವರನ್ನು 2017ರಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಮೂರು ಕೋಟಿ ಮೊತ್ತಕ್ಕೆ ಖರೀದಿ ಮಾಡಿತ್ತು. ಎಡಗೈ ವೇಗಿಯಾಗಿರುವ ನಟ್ಟೂ, 2018ರಲ್ಲಿ ಸನ್ ರೈಸರ್ಸ್ ಹೈದ್ರಬಾದ್ ತಂಡವನ್ನು ಸೇರಿಕೊಂಡ್ರು. ಆದ್ರೆ ಒಂದು ಪಂದ್ಯವನ್ನು ಮಾತ್ರ ಆಡಿದ್ದರು. ಇದೀಗ ಸನ್ ರೈಸರ್ಸ್ ತಂಡದ ಪ್ರಮುಖ ಬೌಲರ್ ಆಗಿದ್ದಾರೆ.
ವೀರೇಂದ್ರ ಸೆಹ್ವಾಗ್, ಮುತ್ತಯ್ಯ ಮುರಳೀಧರನ್ ಹಾಗೂ ಬ್ರೆಟ್ ಲೀ ಕೂಡ ನಟರಾಜನ್ ಅವರ ಯಾರ್ಕರ್ ಎಸೆತಗಳಿಗೆ ಅಚ್ಚರಿಗೊಂಡಿದ್ದಾರೆ. ಸೆಹ್ವಾಗ್ ಕಿಂಗ್ಸ್ ತಂಡದ ಮೆಂಟರ್ ಆಗಿದ್ದಾಗ ನಟರಾಜನ್ಗೆ ಅವಕಾಶ ನೀಡಿದ್ರು. ನಂತರ ಸನ್ ರೈಸರ್ಸ್ ಹೈದ್ರಬಾದ್ ತಂಡವನ್ನು ಸೇರಲು ಪ್ರಮುಖ ಕಾರಣರಾದವರು ಮುತ್ತಯ್ಯ ಮುರಳೀಧರನ್.
ಯುವ ಕ್ರಿಕೆಟಿಗರಿಗೆ ಸಹಾಯ ಮಾಡುತ್ತಿರುವ ನಟರಾಜನ್ ತನ್ನ ಕಷ್ಟದ ದಿನಗಳನ್ನು ಮರೆತಿಲ್ಲ. ತನ್ನೂರಿನಲ್ಲೇ ಅಕಾಡೆಮಿ ನಡೆಸುವ ಮೂಲಕ ಯುವ ಕ್ರಿಕೆಟಿಗರಿಗೆ ಮಾರ್ಗದರ್ಶನಕರಾಗಿದ್ದಾರೆ.