ಬೆಂಗಳೂರು: ರಿಯಾಲಿಟಿ ಶೋಗಳ ಮೂಲಕ ಮನೆ ಮಾತಾಗಿರುವ ನಿರೂಪಕಿ ಅನುಶ್ರೀಗೆ ಡ್ರಗ್ಸ್ ಕೇಸ್ ಕಂಟಕವಾಗಿ ಪರಿಣಮಿಸುತ್ತಾ ಎಂಬ ಚರ್ಚೆ ಶುರುವಾಗಿದೆ.
ಡ್ರಗ್ಸ್ ಪೆಡ್ಲರ್ ಹಾಗೂ ಬಾಲಿವುಡ್ ನಟ ಕಿಶೋರ್ ಶೆಟ್ಟಿ ಹಾಗೂ ಇತ್ತೀಚೆಗೆ ಮಂಗಳೂರು ಸಿಸಿಬಿ ಪೊಲೀಸರಿಂದ ಅರೆಸ್ಟ್ ಆಗಿರುವ ಸ್ಯಾಮ್ ಫರ್ನಾಂಡಿಸ್ ವಿಚಾರಣೆ ವೇಳೆ ಅನುಶ್ರೀ ಡ್ರಗ್ಸ್ ಪಾರ್ಟಿಗಳ ಬಗ್ಗೆ ಬಾಯ್ಬಿಟ್ಟಿದ್ದಾನೆ ಎನ್ನಲಾಗಿದೆ.
ಅನುಶ್ರೀ ಜೊತೆ ಬಿಗ್‍ಬಾಸ್ ಸ್ಪರ್ಧಿಗಳು, ರಿಯಾಲಿಟಿ ಶೋಗಳ ನಟಿಯರು ಡ್ರಗ್ಸ್ ಪಾರ್ಟಿಗಳಲ್ಲಿ ಪಾಲ್ಗೊಳ್ಳುತ್ತಿದ್ದರು ಎಂದು ಸ್ಯಾಮ್ ಫರ್ನಾಂಡಿಸ್ ಬಾಯ್ಬಿಟ್ಟಿದ್ದಾನಂತೆ. ಹೀಗಾಗಿ ಈ ಬಿಗ್‍ಬಾಸ್ ಸ್ಪರ್ಧಿಗಳು, ರಿಯಾಲಿಟಿ ಶೋಗಳ ನಟಿಯರಿಗೆ ಸಿಸಿಬಿ ಪೊಲೀಸರು ನೋಟಿಸ್ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಫೇಸ್‍ಬುಕ್‍ನಲ್ಲಿ ಅನುಶ್ರೀ ಕಣ್ಣೀರಿಟ್ಟಿದ್ದೇಕೆ..!
ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿದಂತೆ ಮಂಗಳೂರು ಸಿಸಿಬಿ ಪೊಲೀಸರು ತನಿಖೆ ಚುರುಕುಗೊಳಿ ಹಲವರನ್ನು ಬಂಧಿಸಿ ವಿಚಾರಣೆಗೊಳಪಡಿಸುತ್ತಿದ್ದಾರೆ. ವಿಚಾರಣೆ ವೇಳೆ ಆರೋಪಿಗಳು ಆಂಕರ್ ಅನುಶ್ರೀ ಹೆಸರು ಹೇಳುತ್ತಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗುತ್ತಿರುವುದಕ್ಕೆ ಬೇಸರಗೊಂಡು ಅನುಶ್ರೀ ಕಣ್ಣೀರಿಟ್ಟಿದ್ದಾರೆ.
ಫೇಸ್‍ಬುಕ್‍ನಲ್ಲಿ ವಿಡಿಯೋ ಹಂಚಿಕೊಂಡಿರುವ ಅನುಶ್ರೀ, ಸೆ.24 ನನ್ನ ಜೀವನದಲ್ಲಿ ಮರೆಯಲಾದ ದಿನ. 12 ವರ್ಷಗಳ ಹಿಂದೆ ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ನಾನು ಗೆದ್ದು ಬಂದೆ. ಅದೇ ಮುಂದೆ ಅದೇ ನನಗೆ ಮುಳ್ಳಾಗುತ್ತದೆ ಅಂತ ಗೊತ್ತಿರಲಿಲ್ಲ. ಕಳೆದ ಒಂದು ವಾರದಿಂದ ನನ್ನ ಹಾಗೂ ನನ್ನ ಮನೆಯವರ ನೆಮ್ಮದಿ ಹಾಳಾಗಿದೆ.
ಸಿಸಿಬಿ ನೊಟಿಸ್ ಬಂದಾಗ ಬೇಜಾರಾಗಲಿಲ್ಲ. ಸಿಸಿಬಿ ನೋಟಿಸ್ ಬಂದ ಮಾತ್ರ, ಸಿಸಿಬಿ ವಿಚಾರಣೆಗೆ ಹೋದ ಮಾತ್ರಕ್ಕೆ ನಾನು ಅಪರಾಧಿ ಅಲ್ಲ. ಡ್ರಗ್ಸ್ ಕೇಸಲ್ಲಿ ನಾನು ಅಪರಾಧಿ ಅಲ್ಲ. ನನ್ನನ್ನು ಅಪರಾಧಿ ತರಹ ಬಿಂಬಿಸುತ್ತಿರುವುದು ನೋವಾಗಿದೆ. ಅಂತೆ ಕಂತೆಗಳ ಮೂಲಕ ವಿಚಾರ ಸೃಷ್ಟಿಯಾಗುತ್ತಿದೆ. ನಾನೇನು ತಪ್ಪು ಮಾಡಿಲ್ಲ, ನನ್ನನ್ನು ನಾನು ಸಮರ್ಥನೆ ಮಾಡಿಕೊಳ್ಳಲು, ಕನ್ನಡಿಗರ ಕನಿಕರ ಗಿಟ್ಟಿಸಿಕೊಳ್ಳಲು ಈ ವಿಡಿಯೋ ಮಾಡುತ್ತಿಲ್ಲ. ಹಿಂದೆಯೂ, ಮುಂದೆಯೂ ನಾನು ಕನ್ನಡಿಗರಿಗೆ ಅವಮಾನ ಮಾಡುವಂತಹ ಕೆಟ್ಟ ಕೆಲಸ ಯಾವತ್ತೂ ಮಾಡುವುದಿಲ್ಲ ಎಂದು ವಿಡಿಯೋದಲ್ಲಿ ಅನುಶ್ರೀ ಕಣ್ಣೀರಿಟ್ಟಿದ್ದಾರೆ.
ನಿಮಿಷಾಂಬ ದೇವಿಗೆ ಹರಕೆ ಸಲ್ಲಿಕೆ
ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ವಿಚಾರಣೆ ಬಳಿಕ ನಿರೂಪಕಿ ಅನುಶ್ರೀ ಮಂಡ್ಯದ ನಿಮಿಷಾಂಬ ದೇವಿಗೆ ಹರಕೆ ಸಲ್ಲಿಸಿದ್ದಾರೆ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿರುವ ನಿಮಿಷಾಂಬ ದೇಗುಲಕ್ಕೆ ಪೋಷಕರು ಹಾಗೂ ಸ್ನೇಹಿತರ ಜತೆ ತೆರಳಿದ ಅನುಶ್ರೀ, ವಿಶೇಷ ಪೂಜೆ ಸಲ್ಲಿಸಿ ಹರಕೆ ಒಪ್ಪಿಸಿದ್ದಾರೆ. ತಮಗೆ ಎದುರಾಗಿರುವ ಸಂಕಷ್ಟಗಳಿಂದ ಪಾರು ಮಾಡುವಂತೆ ಅನುಶ್ರೀ ನಿಮಿಷಾಂಬ ದೇವಿಯ ಮೊರೆ ಹೋಗಿದ್ದಾರೆ.