ಉಡುಪಿ: ಉಡುಪಿಯ ಪುಟ್ಟ ಬಾಲಕಿಯೊಬ್ಬಳು ತಯಾರಿಸಿದ ನೂರಾರು ಮಾಸ್ಕ್ ಗಳು ದೇಶ ಕಾಯುವ ಯೋಧರ ಆರೋಗ್ಯ ರಕ್ಷಿಸುತ್ತಿವೆ. ಈ ಬಾಲಕಿಯ ಸೇವೆಗೆ ಖುದ್ದು ರಕ್ಷಣಾ ಸಚಿವರೇ ಪತ್ರ ಬರೆದು ಮೆಚ್ಚುಗೆ ಸೂಚಿಸಿದ್ದಾರೆ.
ಈ ಪುಟ್ಟ ಪೋರಿ ದೇಶದ ರಕ್ಣಾ ಸಚಿವರ ಗಮನ ಸೆಳೆಯುವ ಮೂಲಕ ಸುದ್ದಿಯಾಗಿದ್ದಾಳೆ. ಈಕೆಯ ಹೆಸರು ಇಶಿತಾ. ಎಂಟನೇ ತರಗತಿಯ ಈ ಬಾಲಕಿ ದೇಶದ ರಕ್ಷಣೆಯಲ್ಲಿ ತೊಡಗಿದ ಯೋಧರಿಗೆ ಕೊರೊನಾದಿಂದ ರಕ್ಷಣೆ ಒದಗಿಸಲು 300 ಮಾಸ್ಕ್ ತಯಾರಿಸಿ ಕಳುಹಿಸಿ ಕೊಟ್ಟಿದ್ದಾಳೆ. ಈಕೆಯ ಈ ಕಾರ್ಯವನ್ನು ಗುರುತಿಸಿ ಸಚಿವ ರಾಜನಾಥ ಸಿಂಗ್ ಪತ್ರ ಬರೆದು ಈಕೆಗೆ ಪ್ರಶಂಸೆ ವ್ಯಕ್ತ ಪಡಿಸಿದ್ದಾರೆ.
ಮಣಿಪಾಲದ ಮಾಧವ ಕೃಪಾ ಶಾಲೆಯಲ್ಲಿ 8ನೇ ತರಗತಿ ಓದುತ್ತಿರುವ ಇಶಿತಾ ಸ್ಕೌಟ್ ಆಂಡ್ ಗೈಡ್‍ನಲ್ಲಿ ಸಕ್ರಿಯಳಾಗಿದ್ದಾಳೆ. ಕೊರೊನಾ ಎಮರ್ಜೆನ್ಸಿ ಸಮಯದಲ್ಲಿ ಮಾಜಿ ಸಚಿವ ಪಿಜಿಆರ್ ಸಿಂಧ್ಯಾ ಅವರು ನೀಡಿದ ಕರೆಯ ಮೇರೆಗೆ ರಾಜ್ಯಾದ್ಯಂತ ಸ್ಕೌಟ್ ಆಂಡ್ ಗೈಡ್ ಸದಸ್ಯರು 10ನೇ ತರಗತಿ ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳಿಗೆ ಉಚಿತ ಮಾಸ್ಕ್ ವಿತರಿಸುವ ತಯಾರಿ ನಡೆಸಿದ್ದರು.
ಇದೇ ಸಮಯದಲ್ಲಿ ಇಶಿತಾ ಕೂಡ ಸ್ವಯಂ ಆಸಕ್ತಿಯಿಂದ ಸುಮಾರು ಮುನ್ನೂರು ಮಾಸ್ಕ್ ತಯಾರಿಸಿದ್ದಾಳೆ. ಈ ಕೆಲಸಕ್ಕೆ ಈಕೆಗೆ ಸಾಥ್ ನೀಡಿದ್ದು ತಾಯಿ ನಂದಿತಾ ಆಚಾರ್. ಮಗಳಿಗೆ ಹೊಲಿಗೆ ಯಂತ್ರ ತರಿಸಿಕೊಟ್ಟು ಯೂಟ್ಯೂಬ್ ವಿಡಿಯೋಗಳಲ್ಲಿ ಮಾಸ್ಕ್ ಹೊಲಿಯೋದು ಹೇಗೆ ಅನ್ನೋದನ್ನು ತೋರಿಸಿಕೊಟ್ಟು ನಂದಿತಾ ಪ್ರೋತ್ಸಾಹ ತುಂಬಿದ್ದಾರೆ. ಇದರಿಂದಾಗಿ ಇಶಿತಾ ರಾತ್ರಿ ಹಗಲು ಕೆಲಸ ಮಾಡಿ 300ಕ್ಕೂ ಅಧಿಕ ಬಟ್ಟೆಯ ಮಾಸ್ಕ್‍ಗಳನ್ನು ತಯಾರಿಸಿದ್ದಾಳೆ.
ಮಾಸ್ಕ್ ತಯಾರಿಸಿದ ಬಳಿಕ ಹತ್ತನೇ ತರಗತಿ ಮಕ್ಕಳಿಗೆ ಬೇಕಾದಷ್ಟು ಮಾಸ್ಕ್ ಸಿದ್ಧವಿದೆ ಎಂಬ ವಿಚಾರ ಇಶಿತಾಳಿಗೆ ತಿಳಿಯಿತು. ಬಳಿಕ ಈ ಮಾಸ್ಕ್ ಗಳನ್ನು ಸ್ವಯಂ ಸೇವಾ ಸಂಘಗಳಿಗೆ ಕೊಡುವ ನಿರ್ಣಯ ಮಾಡಲಾಯಿತಾದರೂ ಅಲ್ಲಿ ಅಗತ್ಯವಿರುವವರಿಗೆ ತಲುಪಿಸುವ ವ್ಯವಸ್ಥೆ ಇಲ್ಲ ಎಂಬ ಮಾಹಿತಿ ಸಿಕ್ಕಿದೆ. ಕೊನೆಗೆ ಈ ಮಾಸ್ಕ್ ಗಳನ್ನು ನಮ್ಮ ಸೇನೆಯ ಯೋಧರಿಗೆ ಕಳುಹಿಸೋದು ಎಂದು ತಾಯಿ ಮಗಳಿಬ್ಬರು ನಿರ್ಧರಿಸಿದ್ದಾರೆ.
300 ಮಾಸ್ಕ್ ಗಳನ್ನು ಪ್ಯಾಕ್ ಮಾಡಿ ಅದರ ಮೇಲೆ ರಕ್ಷಣಾ ಸಚಿವರ ಹೆಸರು ಬರೆದು ಕೊರಿಯರ್ ಕಚೇರಿ ಮುಟ್ಟಿಸಿದ್ದಾರೆ. ಆದರೆ ಅದು ತಲುಪಬಹುದು ಎಂಬ ಸಣ್ಣ ವಿಶ್ವಾಸವೂ ಇವರಿಗಿರಲಿಲ್ಲ. ಆದರೆ ಇದ್ದಕ್ಕಿದ್ದಂತೆ ಪೊಸ್ಟ್ ಮ್ಯಾನ್ ಮನೆಗೆ ಬಂದು ರಾಜನಾಥ ಸಿಂಗ್ ಅವರ ಅಭಿನಂದನಾ ಪತ್ರ ಕೈಗೆ ನೀಡುತ್ತಿದ್ದಂತೆ ಈ ತಾಯಿ ಮಗಳ ಖುಷಿಗೆ ಪಾರವೇ ಇರಲಿಲ್ಲ.
ದೇಶಕ್ಕಾಗಿ ನಮ್ಮ ಯೋಧರು ಪ್ರಾಣ ಮುಡಿಪಾಗಿಟ್ಟು ಗಡಿಯಲ್ಲಿ ಕಾವಲು ಕಾಯುತ್ತಾರೆ. ನಮ್ಮೆಲ್ಲರ ನೆಮ್ಮದಿ ಅವರ ಉಸಿರಿನ ಮೇಲೆ ನಿಂತಿದೆ. ಹೀಗಿರಬೇಕಿದ್ದರೆ ನಾವೂ ಕೂಡ ಅವರ ಆರೋಗ್ಯದ ಬಗ್ಗೆ ಯೋಚಿಸಬೇಕು ಅನ್ನುತ್ತಾಳೆ ಇಶಿತಾ. ರಕ್ಷಣಾ ಸಚಿವರ ಸಾರ್ವಜನಿಕ ಸ್ಪಂದನೆಗೆ ಜನರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದ್ದು ಜನಪ್ರತಿನಿಧಿಗಳು ಈ ರೀತಿ ಪ್ರೋತ್ಸಾಹ ನೀಡಿದರೆ ಮಕ್ಕಳಲ್ಲಿ ರಾಷ್ಟ್ರೀಯ ಪ್ರಜ್ಞೆ ಇನ್ನಷ್ಟು ಬಲಗೊಳ್ಳುವ ಸಾಧ್ಯತೆ ಇದೆ.








