ಹಾಸನ: ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರ ಬೆಂಗಳೂರು ನಿವಾಸದ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದರೆ, ಮತ್ತೊಂದೆಡೆ. ಡಿಕೆಶಿ ಆಪ್ತರಾದ ಸಚಿನ್ ನಾರಾಯಣ್ ಅವರ ಹಾಸನದ ಮನೆ ಮೇಲೂ ದಾಳಿ ನಡೆಸಲಾಯಿತು.
ಬೆಳಿಗ್ಗೆ 5 ಐದು ಗಂಟೆಗೆ ಹಾಸನದ ಬಿಎಂ ರಸ್ತೆಯಲ್ಲಿರುವ ಸಚಿನ್ ನಾರಾಯಣ್ ನಿವಾಸಕ್ಕೆ ಆಗಮಿಸಿದ್ದ 9 ಸಿಬಿಐ ಅಧಿಕಾರಿಗಳ ತಂಡ, ಪರಿಶೀಲನೆ ನಡೆಸಿತು. ಜತೆಗೆ ಅಶೋಕ ಹೋಟೆಲ್ ಮೇಲೂ ದಾಳಿ ಮಾಡಿ ಪರಿಶೀಲನೆ ನಡೆಸಿದ ಅಧಿಕಾರಿಗಳ ತಂಡ ಸತತ 6 ಗಂಟೆಗಳ ಕಾಲ ಪರಿಶೀಲನೆ ನಡೆಸಿ ದಾಖಲೆಗಳನ್ನು ವಶಕ್ಕೆ ಪಡೆದು ತನಿಖೆ ಅಂತ್ಯಗೊಳಿಸಿ ವಾಪಸ್ ತೆರಳಿದ್ದಾರೆ.
ಡಿ.ಕೆ ಶಿವಕುಮಾರ್ ಅವರ ಹಲವು ವ್ಯವಹಾರಗಳಲ್ಲಿ ಸಚಿನ್ ನಾರಾಯಣ್ ಪಾಲುದಾರರಾಗಿದ್ದಾರೆ. ಕಳೆದ ಎರಡು ವರ್ಷಗಳ ಹಿಂದೆ ಡಿಕೆಶಿ ಮನೆ ಮೇಲೆ ಐಟಿ ದಾಳಿ ನಡೆದಾಗ ಸಚಿನ್ ನಾರಾಯಣ್ ನಿವಾಸದ ಮೇಲೂ ದಾಳಿ ನಡೆದಿತ್ತು.
ಡಿ.ಕೆ ಶಿವಕುಮಾರ್ ಮನೆ ಮೇಲೆ ಸಿಬಿಐ ದಾಳಿ ಖಂಡಿಸಿ ಹಾಸನದಲ್ಲಿ ಕಾಂಗ್ರೆಸ್ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿದ ಕೈ ಕಾರ್ಯಕರ್ತರು, ರಸ್ತೆ ತಡೆ ನಡೆಸಲು ಮುಂದಾದರು. ಹೆದ್ದಾರಿ ತಡೆ ಮಾಡದಂತೆ ತಡೆದ ಪೊಲೀಸರ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.