ಬೆಂಗಳೂರು: ಕಾಂಗ್ರೆಸ್ ಪಕ್ಷಕ್ಕೆ ನಾನು ಕಳಂಕ ತರುವ ಕೆಲಸ ಮಾಡುವುದಿಲ್ಲ. ಬಿಜೆಪಿಯ ಕುತಂತ್ರ ರಾಜಕಾರಣಕ್ಕೆ, ಒತ್ತಡಕ್ಕೆ, ಬೆದರಿಕೆ ತಂತ್ರಕ್ಕೆ ಡಿಕೆಶಿ ಹೆದರುವ ವ್ಯಕ್ತಿ ಅಲ್ಲ ಎಂದು ಸಿಬಿಐ ದಾಳಿ ಬಳಿಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಬಿಜೆಪಿಗೆ ಪರೋಕ್ಷ ತಿರುಗೇಟು ನೀಡಿದ್ದಾರೆ.
ಬೆಳಿಗ್ಗೆ 6 ಗಂಟೆಯಿಂದ ನಡೆದ ಸಿಬಿಐ ದಾಳಿ ಬಳಿಕ ಸದಾಶಿವನಗರದ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿ.ಕೆ ಶಿವಕುಮಾರ್, ಬಿಜೆಪಿಯಲ್ಲಿರುವ ಎಲ್ಲ ಮಂತ್ರಿಗಳು ಸತ್ಯ ಹರಿಶ್ಚಂದ್ರರಾ ಎಂದು ಪ್ರಶ್ನಿಸಿದ್ದಾರೆ.
ಸಿಬಿಐ, ಇಡಿ, ಐಟಿ ದಾಳಿ ಮೂಲಕ ನನ್ನ ಬಾಯಿ ಮುಚ್ಚಿಸಲು ಸಾಧ್ಯವಿಲ್ಲ. ನನಗೆ ತೊಂದರೆ ಕೊಡುತ್ತಿರುವವರಿಗೆ ದೇವರು ಒಳ್ಳೆಯದು ಮಾಡಲಿ ಎಂದು ಟಾಂಗ್ ನೀಡಿದ ಡಿಕೆಶಿ ನಾನು ಒತ್ತಡಕ್ಕೆ ಹೆದರುವ ಮಗ ನಾನಲ್ಲ ಎಂದು ಸವಾಲು ಹಾಕಿದ್ದಾರೆ.
ಕಾರ್ಯಕರ್ತರು ಚುನಾವಣೆಯಲ್ಲಿ ಉತ್ತರ ಕೊಡಿ: ಡಿಕೆಶಿ
ಸಿಬಿಐ ದಾಳಿ ವೇಳೆ ಮನೆ ಮುಂದೆ ಪ್ರತಿಭಟನೆ ನಡೆಸುತ್ತಿದ್ದ ಅಭಿಮಾನಿಗಳು, ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಡಿ.ಕೆ ಶಿವಕುಮಾರ್, ನಾನು ಅಧಿಕಾರಕ್ಕೆ ಅಂಟಿಕೊಂಡು ಕೂರುವವನಲ್ಲ. ಈ ಎಲೆಕ್ಷನ್ ಇರೋ ತನಕ ಈ ಅಡ್ಡಿ ಇರುತ್ತೆ. ನಾಳೆಯಿಂದ ಉಪಚುನಾವಣೆಯಲ್ಲಿ ಕಾರ್ಯಕರ್ತರು ಉತ್ತರ ಕೊಡಿ ಎಂದು ಮನೆ ಮುಂದೆ ಕಾಂಗ್ರೆಸ್ ಕಾರ್ಯಕರ್ತರಿಗೆ ಕರೆ ನೀಡಿದರು.
ನನ್ನ ಮೂರು ದಶಕಗಳ ರಾಜಕಾರಣದಲ್ಲಿ ನನ್ನ ವಿರುದ್ಧ ನಡೆದ ತನಿಖೆಗಳಲ್ಲಿ ತಪ್ಪಿತಸ್ಥನನ್ನಾಗಿ ಮಾಡಲು ಆಗಿಲ್ಲ.
ಇದು ಸಿಬಿಐ ತನಿಖೆ ಮಾಡುವ ಪ್ರಕರಣ ಅಲ್ಲ, ಆರ್ಥಿಕ ವಿಚಾರಗಳಿಗೆ ಸಂಬಂಧಿಸಿದ್ದು, ಸಿಬಿಐ ದಾಳಿ ಬೇಡ, ಎಸಿಬಿ ತನಿಖೆ ಮಾಡುವಂತಹ ಪ್ರಕರಣ ಎಂದು ಅಡ್ವೋಕೇಟ್ ಜನರಲ್ ಸಿಎಂಗೆ ಹೇಳಿದ್ದಾರೆ. ಅದರೆ ಯಡಿಯೂರಪ್ಪ ಸಿಬಿಐ ತನಿಖೆ ಆಗಲೇಬೇಕು ಎಂದು ಅದೇಶ ಕೊಟ್ಟಿದ್ದರೆ. ಸಿಬಿಐ ಸೇರಿ ಯಾವ ಅಧಿಕಾರಿಗಳನ್ನು ದೂಷಣೆ ಮಾಡಲ್ಲ. ಸರ್ಕಾರ ಹೇಳಿದಂತೆ ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಬಿಜೆಪಿಯ ರಾಜಕಾರಣಕ್ಕೆ, ಒತ್ತಡಕ್ಕೆ, ಕುತಂತ್ರಕ್ಕೆ, ಹೆದರುವ ವ್ಯಕ್ತಿ ಡಿಕೆಶಿ ಅಲ್ಲ ಎಂದು ಸ್ಪಷ್ಟಪಡಿಸಿದರು.