ಬೆಂಗಳೂರು: ನನ್ನ ಮನೆಯಲ್ಲಿ 3 ಕೋಟಿ, 50 ಲಕ್ಷ, ಚಿನ್ನ ಅದು ಒದು ಸಿಕ್ಕಿದೆ ಎಂದು ಮಾಧ್ಯಮಗಳಲ್ಲಿ ಊಹಾಪೋಹದ ವರದಿ ಬಂದಿದೆ. ಅದರ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಸೀರೆ, ಪ್ಯಾಂಟು ಸೇರಿ ಹಾಗೂ 1.77 ಲಕ್ಷ ಸಿಕ್ಕಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸ್ಪಷ್ಟನೆ ನೀಡಿದ್ದಾರೆ.
ಸಿಬಿಐ ದಾಳಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆಶಿ, ಸಿಬಿಐ ಅಧಿಕಾರಿಗಳು ನನ್ನ ಮನೆಯಲ್ಲಿ ಪ್ಯಾಂಟು, ಸೀರೆ, ಪಂಚೆಗಳ ಲೆಕ್ಕ ಸೇರಿದಂತೆ ಅವರು ಬೇಕಾದನ್ನು ಲೆಕ್ಕ ಮಾಡಿಕೊಂಡು ಹೋಗಿದ್ದಾರೆ. ಆದರೆ ನನ್ನ ಮನೆಯಲ್ಲಿ 1.77 ಲಕ್ಷ ಸಿಕ್ಕಿದೆ, ಸೀರೆ ಪಂಚೆ, ಬಟ್ಟೆ ಸಿಕ್ಕಿದೆ ಎಂದು ಸಿಬಿಐ ಅಧಿಕಾರಿಗಳು ಪಂಚನಾಮೆ ಕೊಟ್ಟಿದ್ದಾರೆ. ನನ್ನ ಕಚೇರಿಯಲ್ಲಿ ಮೂರ್ನಾಲ್ಕು ಲಕ್ಷ ಸಿಕ್ಕಿರಹುದು, ಅದು ಖರ್ಚಿಗೆಂದು ಇಟ್ಟಿದೆ, ಡಿಕೆ ಸುರೇಶ್ ಮನೆ, ದೆಹಲಿ ಸೇರಿದಂತೆ ಎಲ್ಲಿ ಎಷ್ಟು ಸಿಕ್ಕಿದೆಯೋ ಗೊತ್ತಿಲ್ಲ. ನನ್ನ ಮನೆಯಲ್ಲಿ ಸಿಕ್ಕಿದ್ದು ಮಾತ್ರ 1.77 ಲಕ್ಷ ಎಂದು ತಿಳಿಸಿದರು.
ಸರ್ಕಾರಕ್ಕೆ ನಾನೊಬ್ಬನೇ ಸಿಕ್ಕಿದ್ದೇನೆ, ಬೇರೆ ಯಾರೂ ಇಲ್ಲವಾ, ನನ್ನ ಬಾಯಿ ಮುಚ್ಚಿಸಲು ಯಾರಿಂದಲೂ ಸಾಧ್ಯವಿಲ್ಲ. ನನ್ನ ಜನರು, ಅಭಿಮಾನಿಗಳು, ಹೈಕಮಾಂಡ್ ಇರುವವರೆಗೆ ಹೆದರುವುದಿಲ್ಲ, ಬೆದರುವುದಿಲ್ಲ. ರೈತನಾಗಿ ಬೆಳೆದು ಬಂದವನು, ರೈತನಾಗಿ, ವ್ಯಾಪಾರಿಯಾಗಿ, ಉದ್ಯಮಿಯಾಗಿ, ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದೇನೆ. ರಾಜಕಾರಣ ನನ್ನ ಪ್ಯಾಶನ್ ಎಂದು ಡಿಕೆಶಿ ಸ್ಪಷ್ಟಪಡಿಸಿದರು.
ನಾನು ವಿಕ್ಟರಿ ಸಿಂಬಲ್ ತೋರಿಸಿ ಬರಲಿಲ್ಲ -ಬಿಜೆಪಿ ನಾಯಕರಿಗೆ ಪರೋಕ್ಷ ಟಾಂಗ್
2019ರಲ್ಲಿ ಇಡಿ ದಾಳಿ ಆಗಿ 48 ದಿನ ಜೈಲು ಅನುಭವಿಸಬೇಕಾಯಿತು, ನ್ಯಾಯಾಲಯ ಜಾಮೀನು ಕೊಟ್ಟಿದೆ. ನಾನು ಜೈಲಿನಿಂದ ಹೊರ ಬಂದಾಗ ಸಂಭ್ರಮಾಚರಣೆ ಬೇಕಿತ್ತಾ ಎಂದರು, ಆದರೆ, ಪರಪ್ಪನ ಅಗ್ರಹಾರ ಜೈಲಿನಿಂದ ಬಂದವರು ಹೇಗೆ ಬಂದವರು ಎಂದು ಗೊತ್ತಿದೆ. ಆದರೆ ನಾನು ಜನರಿಗೆ ಕೈಮುಗಿದು ಬಂದೆ, ಆದರೆ ನಾನು ವಿಕ್ಟರಿ ಸಿಂಬಲ್ ತೋರಿಸಿ ಬರಲಿಲ್ಲ ಎಂದು ಬಿಜೆಪಿ ನಾಯಕರಿಗೆ ಪರೋಕ್ಷ ಟಾಂಗ್ ನೀಡಿದ ಡಿಕೆಶಿ, ಕೊರೊನಾ ಸಂಕಷ್ಟದಲ್ಲಿ ಕೇಂದ್ರದವರು 20 ಲಕ್ಷ ಕೋಟಿ, ರಾಜ್ಯದ 1700 ಕೋಟಿ ಕೊಟ್ಟರು, ಅದು ಎಲ್ಲಿ ಹೋಯ್ತು ಗೊತ್ತಿಲ್ಲ. ಆದರೆ ಈ ಹಣ ಕೊರೊನಾದಿಂದ ಸಂಕಷ್ಟದಲ್ಲಿದ್ದವರಿಗೆ ತಲುಪಲಿಲ್ಲ. ಪ್ರತಿಭಟನೆ ಮಾಡಲು ಸಿದ್ದತೆ ಮಾಡಿಕೊಂಡಾಗ ಸಿಬಿಐ ಮೂಲಕ ದಾಳಿ ಮಾಡಿಸಿದ್ದಾರೆ ಎಂದರು.
57 ಲಕ್ಷ ನಗದು ಸಿಕ್ಕಿದೆ:ಸಿಬಿಐ
ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮನೆ ಸೇರಿದಂತೆ 14 ಕಡೆ ದಾಳಿ ನಡೆಸಲಾಗಿದೆ. ಇಂದು ನಡೆದ ದಾಳಿಯಲ್ಲಿ 57 ಲಕ್ಷ ನಗದು ಸಿಕ್ಕಿದೆ, ಇತರೆ ದಾಖಲೆಗಳು ಸಿಕ್ಕಿವೆ ಎಂದು ಸಿಬಿಐ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.