ಬೆಳಗಾವಿ: ಬಿಜೆಪಿಯಲ್ಲಿ ಯಾರೂ ದುಡ್ಡು ಮಾಡಿಲ್ವಾ, ಅವರೆಲ್ಲರೂ ಸತ್ಯ ಹರಿಶ್ಚಂದ್ರರೇ ಇದ್ದಾರಾ, ಅದರಲ್ಲೂ ಕಾಂಗ್ರೆಸ್ ಹಾಗೂ ಕೇವಲ ಡಿ.ಕೆ ಶಿವಕುಮಾರ್ ಅವರನ್ನು ಮಾತ್ರ ಟಾರ್ಗೆಟ್ ಮಾಡಲು ಕಾರಣ ಏನೆಂದು ಬಿಜೆಪಿ ಹೇಳಬೇಕೆಂದು ಮಾಜಿ ಸಚಿವ ಸತೀಶ್ ಜಾರಕಿಹೊಳಿ ಸವಾಲು ಹಾಕಿದ್ದಾರೆ.
ಬೆಳಗಾವಿ ನಗರದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸತೀಶ್ ಜಾರಕಿಹೊಳಿ, ಡಿ.ಕೆ.ಶಿವಕುಮಾರ್ ಸತ್ಯ ಹರಿಶ್ಚಂದ್ರ ಅಲ್ಲ ಎಂದು ಬೆಳಗಾವಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ನೀಡಿದ್ದ ಹೇಳಿಕೆಗೆ ತಿರುಗೇಟು ನೀಡಿದರು.
ರಾಜಕೀಯದಲ್ಲಿ ಯಾರೂ ಸತ್ಯ ಹರಿಶ್ಚಂದ್ರರಲ್ಲ ಎನ್ನುವುದು ಸತ್ಯ. ಆದರೆ ಒಂದು ಇತಿಮಿತಿ ಇರುತ್ತದೆ. ಮಾಧ್ಯಮಗಳ ಮುಂದೆ ಹೇಳಬೇಕು ಎಂದು ಪ್ರಹ್ಲಾದ್ ಜೋಷಿ ಏನೋ ಟೀಕಿಸಿದ್ದಾರೆ. ಬಿಜೆಪಿಯಲ್ಲಿ ಯಾರೂ ದುಡ್ಡು ಮಾಡಿಲ್ಲವೇ. ಎಲ್ಲರ ಮೇಲೆ ತನಿಖೆ ನಡೆಯಲಿ ಎಂದು ಟಾಂಗ್ ನೀಡಿದರು.
ಡಿ.ಕೆ ಶಿವಕುಮಾರ್ ಮನೆ ಮೇಲೆ ಸಿಬಿಐ ದಾಳಿ ಹಿಂದೆ ಬಿಜೆಪಿ ಕುತಂತ್ರ ಇದೆ. ಪ್ರಹ್ಲಾದ್ ಜೋಷಿ ಅವರು ತಮ್ಮ ಸರ್ಕಾರದಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಮರೆ ಮಾಚುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರವನ್ನು 10 ಪರ್ಸೆಂಟ್ ಸರ್ಕಾರ ಎಂದು ಪ್ರಧಾನಿ ಮೋದಿ ಟೀಕಿಸಿದ್ದರು. ಈಗ ಅವರದೇ ಬಿಜೆಪಿ ಸರ್ಕಾರ 30 ಪರ್ಸೆಂಟೇಜ್ ಸರ್ಕಾರವಾಗಿ ಬಿಟ್ಟಿದೆ ಎಂದು ಸತೀಶ್ ವ್ಯಂಗ್ಯವಾಡಿದ್ದಾರೆ.
ನ್ಯಾಯ ಎಲ್ಲರಿಗೂ ಒಂದೇ ಆಗಿರಬೇಕು. ತನಿಖೆ ನಡೆಸುವುದಾದರೆ ಬಿಜೆಪಿ, ಕಾಂಗ್ರೆಸ್ ಸೇರಿ ಎಲ್ಲ ರಾಜಕಾರಣಿಗಳ ಮೇಲೆ ಆಗಲಿ. ಕಾಂಗ್ರೆಸ್ ಪಕ್ಷದವರು ಯಾಕೆ ಈ ದಾಳಿ ಟಾರ್ಗೆಟ್. ಅದರಲ್ಲಿ ಡಿಕೆಶಿ ಮಾತ್ರ ಒಬ್ಬರೇ ಯಾಕೆ ಟಾರ್ಗೆಟ್ ? ಬಿಜೆಪಿಯಲ್ಲಿ ಯಾರೂ ಹಣ ಸಂಪಾದನೆ ಮಾಡಿಲ್ಲವಾ ಹಾಗಿದ್ದರೆ ಎಂದು ತಿರುಗೇಟು ನೀಡಿದ್ದಾರೆ.