ಜಗತ್ತಿನಾದ್ಯಂತ ಕೊರೋನಾ ವೈರಸ್ ಜನರಿಗೆ ಭಯಭೀತ ವಾತಾವರಣ ನಿರ್ಮಿಸಿದ್ದು ಮಾತ್ರವಲ್ಲದೆ, ಅರ್ಥಿಕ ವ್ಯವಸ್ಥೆ ಮೇಲೆಯೂ ಪರಿಣಾಮ ಬೀರಿದೆ. ಈಗಾಗಲೇ ಷೇರು ಪೇಟೆ, ಪ್ರವಾಸೋದ್ಯಮ, ವೈಮಾನಿಕ ಉದ್ಯಮ, ವ್ಯಾಪಾರಿ ಕ್ಷೇತ್ರಗಳಿಗೆ ಭಾರೀ ಪೆಟ್ಟನ್ನು ನೀಡಿದೆ. ಜಾಗತಿಕ ಅರ್ಥಿಕ ವ್ಯವಸ್ಥೆಯಂತೂ ಪಾತಾಳಕ್ಕೆ ಕುಸಿದಿದೆ. ಇವೆಲ್ಲದರ ಜೊತೆಗೆ ಕೊರೋನಾ ಭೀತಿ ಈಗ ಮನೊರಂಜನಾ ಉದ್ಯಮದ ಕಡೆ ಸರಿದಿದೆ. ಈಗಾಗಲೇ ಒಂದು ವಾರಗಳ ಕಾಲ ಸಿನಿಮಾ ಥಿಯೇಟರ್ ಮತ್ತು ಮಾಲ್ಗಳನ್ನು ಮುಚ್ಚುವಂತೆ ಸರ್ಕಾರ ಆದೇಶ ಹೊರಡಿಸಿದ್ದು, ಇದರ ಬೆನ್ನಲ್ಲೆ ಮಾರ್ಚ್ 19 ರಿಂದ ಮಾರ್ಚ್ 31 ರ ವರೆಗೂ ಎಲ್ಲಾ ಟಿವಿ ಧಾರವಾಹಿಗಳು, ಸಿನಿಮಾ, ಡಾಕ್ಯುಮೆಂಟರಿಗಳ ಚಿತ್ರೀಕರಣವನ್ನು ರದ್ದು ಮಾಡಲಾಗಿದೆ.
ಐಎಂಪಿಪಿಎ, ಎಫ್ಡಬ್ಲುಐಸಿಇ, ಐಎಫ್ಟಿಡಿಎ, ಐಎಫ್ಟಿಪಿಸಿ, ಡಬ್ಲುಐಎಫ್ಪಿಎ (IMPPA, FWICE, IFTDA, IFTPC, WIFPA) ಸಂಘಗಳು ಭಾನುವಾರ ಒಟ್ಟಿಗೆ ಸಭೆ ನಡೆಸಿ ಈ ನಿರ್ಣಯಕ್ಕೆ ಬಂದಿವೆ. ನಿರ್ಮಾಪಕರಿಗೆ ಮೂರು ದಿನಗಳ ಕಾಲಾವಕಾಶವನ್ನು ನೀಡಲು ಸಹ ಟೆಲಿವಿಷನ್ ಅಸೋಷಿಯೇಷನ್ ನಿರ್ಣಯ ತೆಗೆದುಕೊಂಡಿದ್ದು, ಭಾನುವಾರ ನಡೆದ ಮೀಟಿಂಗ್ನಲ್ಲಿ ಮಾರ್ಚ್ 19 ರಿಂದ ಮಾರ್ಚ್ 31ರ ವರೆಗೆ ಚಿತ್ರೀಕರಣವನ್ನು ಬಂದ್ ಮಾಡಲು ತೀರ್ಮಾನ ಕೈಗೊಂಡಿದ್ದಾರೆ. ಎಲ್ಲಾ ನಿರ್ಮಾಪಕರು ಇನ್ನು ಮೂರು ದಿನಗಳ ಒಳಗಾಗಿ ಭಾರತ ಮತ್ತು ವಿದೇಶದಲ್ಲಿ ನಡೆಯುತ್ತಿರುವ ಚಿತ್ರೀಕರಣವನ್ನು ಬಂದ್ ಮಾಡಬೇಕು ಎಂದು ಟೆಲಿವಿಷನ್ ಅಸೋಷಿಯೇಷನ್ ಸೂಚನೆ ನೀಡಿದೆ.
25 ಲಕ್ಷಕ್ಕೂ ಹೆಚ್ಚು ಮಂದಿ ದಿನಗೂಲಿ ಲೆಕ್ಕದಲ್ಲಿ ಸಿನಿಮಾ-ಧಾರವಾಹಿಗಳಿಗೆ ಕೆಲಸ ಮಾಡುತ್ತಾರೆ. ಜ್ಯೂನಿಯರ್ ಆರ್ಟಿಸ್ಟ್, ಲೈಟ್ ಬಾಯ್, ಸೆಟ್ ಕ್ಲೀನರ್, ಡಾನ್ಸರ್ಸ್, ಸಾಹಸ ಕಲಾವಿದರು, ಸ್ಟಂಟ್ ಕಲಾವಿದರು, ಮೇಕಪ್ ಆರ್ಟಿಸ್ಟ್, ಅಡುಗೆಯವರು, ವಾಹನ ಚಾಲಕರು ಹೀಗೆ ಹಲವು ಮಂದಿ ಸಿನಿಮಾ-ಧಾರವಾಹಿಗಳಿಗೆ ಕೆಲಸ ಮಾಡುತ್ತಿರುತ್ತಾರೆ. ಇವರೆಲ್ಲರ ಆರೋಗ್ಯವೇ ಮುಖ್ಯ ಎಂಬ ಕಾರಣಕ್ಕೆ ಚಿತ್ರೀಕರಣವನ್ನು ಒಂದು ವಾರಗಳ ಕಾಲ ಬಂದ್ ಮಾಡುವ ತೀರ್ಮಾನಕ್ಕೆ ಟೆಲಿವಿಷನ್ ಅಸೋಷಿಯೇಷನ್ ಮತ್ತು ಸಾಕಷ್ಟು ಸಂಘಗಳು ಭಾನುವಾರ ಒಟ್ಟಿಗೆ ಸಭೆ ನಡೆಸಿ ತೀರ್ಮಾನಕ್ಕೆ ಬಂದಿದೆ. ಕೊರೊನಾ ಭೀತಿ ಇವರೆಲ್ಲರ ದಿನಗೂಲಿಯನ್ನು ಕಸಿದುಕೊಂಡಿದ್ದು ಮಾತ್ರವಲ್ಲದೆ ಧಾರವಾಹಿ ಚಿತ್ರೀಕರಣ ಬಂದ್ ಆಗಲಿರುವುದು ಟಿವಿ ಚಾನೆಲ್ ಗಳ ಮೇಲೂ ಪ್ರಭಾವ ಬೀರಲಿದೆ.








