ಅಣ್ಣಮಲೈ ಹಾದಿಯಲ್ಲೇ ಐಪಿಎಸ್ ಅಧಿಕಾರಿ ರವಿ ಡಿ ಚನ್ನಣ್ಣನವರ್ ರಾಜಕೀಯದತ್ತ ಮುಖ ಮಾಡಲಿದ್ದಾರಂತೆ. ಸದ್ಯ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ರವಿ ಡಿ ಚನ್ನಣ್ಣನವರ್, ರಾಜಕಾರಣಕ್ಕೆ ಎಂಟ್ರಿ ಕೊಡಬೇಕೆಂದು ವೇದಿಕೆ ಸಿದ್ಧಪಡಿಸಿಕೊಳ್ಳುತ್ತಿದ್ದಾರೆ ಎನ್ನಲಾಗುತ್ತಿದೆ. ಇದರ ಭಾಗವಾಗಿಯೇ ರವಿ ಚೆನ್ನಣ್ಣನವರ್ ಅವರು ದೊಡ್ಡಬಳ್ಳಾಪುರದಲ್ಲಿ ಬೆಂಬಲಿಗ ಯುವಕರ ದೊಡ್ಡ ಪಡೆಯನ್ನೇ ಹೊಂದಿದ್ದಾರೆ. ಇದಲ್ಲದೇ ರಾಜಕಾರಣ ಎಂಟ್ರಿಯ ಮೊದಲ ಭಾಗವಾಗಿ ವಿವಿಧ ಸಮಾಜ ಸೇವಾ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರಂತೆ. ಇತ್ತೀಚೆಗೆ ಇಲಾಖೆಯ ವತಿಯಿಂದಲೂ ಅನೇಕ ಸಾಮಾಜಿಕ ಸೇವೆಯ ಕಾರ್ಯಕ್ರಮಗಳನ್ನೂ ರವಿ ಡಿ ಚನ್ನಣ್ಣನವರ್ ಆಯೋಜಿಸುತ್ತಿದ್ದಾರೆ ಎನ್ನಲಾಗಿದೆ.
ಇನ್ನು ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ತಮಗೆ ರಾಜಕಾರಣಕ್ಕೆ ಬರಬೇಕೆಂಬ ಆಸೆ ಇರುವುದಾಗಿರವಿ ಡಿ ಚೆನ್ನಣ್ಣನವರ್ ಹೇಳಿದ್ದು, ಅದಕ್ಕಾಗಿ ಎಲ್ಲಾ ರೀತಿಯ ತಯಾರಿ ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗಿದೆ. ರವಿ ಡಿ ಚೆನ್ನಣ್ಣನವರ್ ಅವರು, ನಾಯಕ ಸಮುದಾಯಕ್ಕೆ ಸೇರಿದ್ದು, ದೊಡ್ಡಬಳ್ಳಾಪುರ ಅಥವಾ ನೆಲಮಂಗಲ ಕ್ಷೇತ್ರಗಳಿಂದ ರಾಜಕೀಯ ಅಖಾಡಕ್ಕೆ ಇಳಿಯಲಿದ್ದಾರೆ ಎನ್ನುತ್ತಿವೆ ಬಲ್ಲ ಮೂಲಗಳು.
ಈ ಬಗ್ಗೆ ಮಾತನಾಡಿದ ಅವರು, ನನಗೆ ಸದ್ಯಕ್ಕೆ ರಾಜಕೀಯಕ್ಕೆ ಬರಲು ಸಾಧ್ಯವಿಲ್ಲ. ಈಗ ನನ್ನ ಮುಂದಿನ ಗುರಿಯೇನಿದ್ದರೂ ನಮ್ಮ ಪೊಲೀಸ್ ಇಲಾಖೆಯಲ್ಲೇ ಉನ್ನತ ಹುದ್ದೆಗೆ ಏರುವುದಾಗಿದೆ. ಹೀಗಾಗಿ, ಬೇರೆ ವಿಚಾರಗಳತ್ತ ಗಮನ ಹರಿಸಿಲ್ಲ ಅಂತಾ ಹೇಳಿದ್ದಾರೆ.








