ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಬ್ರೇಕ್‍ಫೇಲ್ ಆದಂತೆ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಸದ್ಯಕ್ಕೆ ಶಾಲೆಗಳನ್ನು ತೆರೆಯಬೇಡಿ. ಎಲ್ಲಕ್ಕಿಂತ ಮಕ್ಕಳ ಜೀವ ಮುಖ್ಯ. ಶಾಲೆಗಳನ್ನು ತೆರೆಯುವುದಕ್ಕಿಂತ ಪರೀಕ್ಷೆ ರಹಿತ ಶೈಕ್ಷಣಿಕ ವರ್ಷವೆಂದು ಘೋಷಿಸಿ ಪ್ರಮೋಟ್ ಮಾಡಬೇಕು ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರಿಗೆ ಸುದೀರ್ಘ ಪತ್ರ ಬರೆದಿರುವ ಸಿದ್ದರಾಮಯ್ಯ, ಈ ಹಿಂದೆ ಸರ್ಕಾರ ವಿವಿಧ ತರಗತಿಗಳಿಗೆ ಪರೀಕ್ಷೆ ನಡೆಸುವ ಇರಾದೆ ವ್ಯಕ್ತಪಡಿಸಿದಾಗ ಸರ್ಕಾರದ ನಿಲುವಿಗೆ ನಾನು ಬೆಂಬಲಿಸಿದ್ದೆ. ಆದರೆ ಈಗಿನ ಪರಿಸ್ಥಿತಿಯೇ ಬೇರೆಯಿದೆ. ಕೊರೊನಾ ಮಿತಿಮೀರಿ ಹರಡುತ್ತಿರುವ ಇಂತಹ ಸಂದರ್ಭದಲ್ಲಿ ಶಾಲೆಗಳನ್ನು ತೆರೆಯುವುದು ದೊಡ್ಡ ಅವಘಡಕ್ಕೆ ಎಡೆ ಮಾಡಿಕೊಡಲಿದೆ ಎಂದು ಎಚ್ಚರಿಸಿದ್ದಾರೆ.
ನಿತ್ಯ ರಾಜ್ಯದಲ್ಲಿ 10,000ದ ಅಸುಪಾಸು ಕೊರೊನಾ ಸೋಂಕಿನ ಪ್ರಕರಣಗಳು ದಾಖಲಾಗುತ್ತಿವೆ. ಈವರೆಗೆ 7,857 ಮಂದಿ ಈ ಮಾರಕ ರೋಗಕ್ಕೆ ಬಲಿಯಾಗಿದ್ದಾರೆ. ಆದರೂ ಮಾಸ್ಕ್, ಸ್ಯಾನಿಟೈಸರ್, ಸಾಮಾಜಿಕ ಅಂತರ ಕಾಪಾಡಿಕೊಳ್ಳುವಲ್ಲಿ ಪ್ರಜ್ಞಾವಂತರೇ ಎಡವುತ್ತಿದ್ದಾರೆ. ಅಂದಮೇಲೆ ಚಿಕ್ಕ ಮಕ್ಕಳಿಂದ ಇದನ್ನು ನಿರೀಕ್ಷಿಸಲು ಸಾಧ್ಯವೇ?.
ಮಕ್ಕಳು ಶಾಲೆಗಳಿಂದ ಕೊರೊನಾಗೆ ತುತ್ತಾಗಿ ಮನೆಗೆ ಬಂದರೆ ಮಕ್ಕಳ ಜೀವಕ್ಕೂ ಆಪತ್ತು, ಜೊತೆಗೆ ಮನೆಯಲ್ಲಿರುವ ಹಿರಿಯರು, ರೋಗಿಗಳ ಜೀವಕ್ಕೂ ಆಪತ್ತು ಬರಲಿದೆ. ಈಗಾಗಲೇ ಅಮೆರಿಕಾ ಹಾಗೂ ಯುರೋಪಿನ ಕೆಲವು ದೇಶಗಳು ಶಾಲೆಗಳನ್ನು ತೆರೆದು ಕೈಸುಟ್ಟುಕೊಂಡಿವೆ, ಅವುಗಳ ಸಾಲಿಗೆ ನಾವು ಸೇರುವುದು ಬೇಡ.
ಶಾಲೆಗಳು ತೆರೆಯದಿರುವ ಕಾರಣಕ್ಕೆ ಬಾಲ್ಯ ವಿವಾಹ ಹಾಗೂ ಬಾಲ ಕಾರ್ಮಿಕ ಪದ್ಧತಿಗಳು ಹೆಚ್ಚುತ್ತಿರುವುದು ಸತ್ಯವಾದರೂ, ಅದನ್ನು ಜಿಲ್ಲಾಡಳಿತ ಹಾಗೂ ಇತರೆ ಇಲಾಖೆಗಳ ಮೂಲಕ ನಿಯಂತ್ರಿಸಲು ಸಾಕಷ್ಟು ಅವಕಾಶಗಳಿವೆ. ಒಂದು ಸಮಸ್ಯೆಯ ಪರಿಹಾರಕ್ಕಾಗಿ ಇನ್ನೊಂದು ಹೊಸ ಸಮಸ್ಯೆಯನ್ನು ಹುಟ್ಟುಹಾಕುವುದು ಸರಿಯಲ್ಲ.
ರಾಜ್ಯದಲ್ಲಿ ಶಾಲೆಗಳನ್ನು ಆರಂಭಿಸುವ ತಪ್ಪು ನಿರ್ಧಾರವನ್ನು ಸರ್ಕಾರ ಮತ್ತು ಶಿಕ್ಷಣ ಇಲಾಖೆ ತೆಗೆದುಕೊಳ್ಳಬಾರದು. ಮಕ್ಕಳಿಗೆ ಆನ್‍ಲೈನ್ ಶಿಕ್ಷಣಕ್ಕೆ ಬೇಕಾದ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಿ, ಆ ಮೂಲಕವೇ ಶಿಕ್ಷಣ ನೀಡಬೇಕು ಹಾಗೂ ಪ್ರಸಕ್ತ ವರ್ಷ ಎಲ್ಲಾ ವಿದ್ಯಾರ್ಥಿಗಳಿಗೆ ಮುಂದಿನ ತರಗತಿಗೆ ಬಡ್ತಿ ನೀಡಬೇಕು ಎಂದು ಸಲಹೆ ನೀಡುತ್ತಿದ್ದೇನೆ ಎಂದು ಪತ್ರದಲ್ಲಿ ಸಲಹೆ ನೀಡಿದ್ದಾರೆ.