ನಾಡಿನ ಸಾಕ್ಷಿ ಪ್ರಜ್ಞೆ, ಕನ್ನಡ ಪರ ಹೋರಾಟಗಾರ, ಕನ್ನಡಕ್ಕೆ ಪ್ರತ್ಯೇಕ ಧ್ವಜ ಬೇಕು ಎಂದು ಗಟ್ಟಿಯಾಗಿ ಸದ್ದು ಮಾಡಿದ ಹಿರಿಯ ಸಾಹಿತಿ, ಪತ್ರಕರ್ತ ನಾಡೋಜ ಪಾಟೀಲ್ ಪುಟ್ಟಪ್ಪ ಇನ್ನಿಲ್ಲ.ಕಳೆದ ಒಂದು ತಿಂಗಳಿಂದ ವಯೋ ಸಹಜ ಕಾಯಿಲೆಗಳಿಗೆ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ನಾಡೋಜ ಪಾಟೀಲ್ ಪುಟ್ಟಪ್ಪನವರು ತಮ್ಮ 101 ವಯಸ್ಸಿನಲ್ಲಿ ನಿಧನರಾಗಿದ್ದಾರೆ. ನಿನ್ನೆ ರಾತ್ರಿ 10.10 ಕ್ಕೆ ಪಾಪು ನಮ್ಮನ್ನು ಅಗಲಿದ್ದಾರೆ ಎಂದು ಕಿಮ್ಸ್ ನಿರ್ದೇಶಕ ಡಾ.ರಾಮಲಿಂಗಪ್ಪ ಅಂಟರತಾನಿ ಹೇಳಿದ್ದಾರೆ.
ಪಾಪು ಅವರು ವಿಪರೀತ ಜ್ವರ, ಉಸಿರಾಟದ ತೊಂದರೆ ಅನುಭವಿಸುತ್ತಿದ್ದರು. ಕಿಡ್ನಿ ತೊಂದರೆ,ರಕ್ತ ಹೀನತೆ ಮತ್ತು ಸೋಂಕು ಕಂಡು ಬಂದಿತ್ತು. ಈ ಎಲ್ಲಾ ಕಾಯಿಲೆಗಳಿಗೆ ಚಿಕಿತ್ಸೆ ನೀಡಲಾಗಿತ್ತು. ಆರೋಗ್ಯದಲ್ಲೂ ಸಹ ಸುಧಾರಣೆ ಕಂಡು ಬಂದಿತ್ತು. ಶಸ್ತ್ರಚಿಕಿತ್ಸೆ ನಂತರದಲ್ಲಿ ಆರೋಗ್ಯ ಆರೋಗ್ಯ ಗಂಭೀರವಾಗಿತ್ತು. ಹಾಗಾಗಿ ಕಳೆದ ನಾಲ್ಕು ದಿನಗಳಿಂದ ವೆಂಟಿಲೇಟರ್ ಅಳವಡಿಸಲಾಗಿತ್ತು.
ನಿನ್ನೆಯಷ್ಟೇ ರಾಜ್ಯದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಕಿಮ್ಸ್ ಆಸ್ಪತ್ರೆಗೆ ಭೇಟಿ ಪಾಟೀಲ ಪುಟ್ಟಪ್ಪನವರ ಆರೋಗ್ಯ ವಿಚಾರಿಸಿದ್ದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ್ದ ಅವರು, ಪಾಟೀಲ್ ಪುಟ್ಟಪ್ಪನವರಿಗೆ ರಾಷ್ಟ್ರೀಯ ಬಸವ ಪುರಸ್ಕಾರ ಪ್ರಧಾನ ಮಾಡಲು ಸರ್ಕಾರ ತಯಾರಿ ಮಾಡಿಕೊಂಡಿದೆ ಎಂದು ಹೇಳಿದ್ದರು.
ಪಾಟೀಲ್ ಪುಟ್ಟಪ್ಪನವರಿಗೆ ನಾಲ್ಕು ಜನ ಮಕ್ಕಳಿದ್ದಾರೆ. ಇಬ್ಬರು ಪುತ್ರರು, ಇಬ್ಬರು ಪುತ್ರಿಯರು. ಒಬ್ಬ ಪುತ್ರ ನಿಧನರಾಗಿದ್ದಾರೆ.
ಅಂತಿಮ ದರ್ಶನ
ಪಾಟೀಲ್ ಪುಟ್ಟಪ್ಪನವರ ಅಂತಿಮ ದರ್ಶನಕ್ಕೆ ಹುಬ್ಬಳ್ಳಿಯ ವಿಶ್ವೇಶ್ವರನಗರದಲ್ಲಿರುವ ಸ್ವಗೃಹದಲ್ಲಿ, ಬೆಳಿಗ್ಗೆ 9 ರಿಂದ1 ಗಂಟೆಗೆ ವರೆಗೂ ವ್ಯವಸ್ಥೆ ಮಾಡಲಾಗಿದೆ.
ಪಾಪು ಅಂತ್ಯಕ್ರಿಯೆ
ಪಾಟೀಲ್ ಪುಟ್ಟಪ್ಪನವರ ಅಂತ್ಯಕ್ರಿಯೆ ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ಹಲಗೇರಿ ಗ್ರಾಮದಲ್ಲಿ ನಡೆಯಲಿದೆ. ಸಂಜೆ ಐದು ಗಂಟೆಗೆ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ