ಹಾವೇರಿ: ರಾಜ್ಯದಲ್ಲಿ ವಿದ್ಯಾಗಮ ಯೋಜನೆ ಪ್ರಾರಂಭವಾದ ನಂತರ ಕೊರೊನಾಗೆ ಶಿಕ್ಷಕರ ಸರಣಿ ಸಾವು ಮುಂದುವರೆದಿದ್ದು, 100ಕ್ಕೂ ಹೆಚ್ಚು ಶಿಕ್ಷಕರು ಬಲಿಯಾಗಿದ್ದಾರೆ.
ಇದರ ಬೆನ್ನಲ್ಲೇ, ಹಾವೇರಿ ಜಿಲ್ಲೆಯಲ್ಲಿ ಮತ್ತೊಬ್ಬ ಶಿಕ್ಷಕ ಹೆಮ್ಮಾರಿ ಕೊರೊನಾಗೆ ಬಲಿಯಾಗಿದ್ದಾರೆ. ಹಾವೇರಿ ತಾಲೂಕಿನ ಮರೋಳ ಸರ್ಕಾರಿ ಶಾಲೆಯ ಹಿರಿಯ ಪ್ರಾಥಮಿಕ ಶಾಲೆಯ ಐವತ್ತೈದು ವರ್ಷದ ಶಿಕ್ಷಕ ಕೊರೊನಾಗೆ ಬಲಿಯಾಗಿದ್ದಾರೆ.
ಕಳೆದ 14 ದಿನಗಳಿಂದ ಹಾವೇರಿಯ ಕೋವಿಡ್ ಆಸ್ಪತ್ರೆಯಲ್ಲಿ ಶಿಕ್ಷಕರು ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಬೆಳಗಿನ ಜಾವ ಚಿಕಿತ್ಸೆ ಫಲಕಾರಿಯಾಗದೇ ಶಿಕ್ಷಕ ಮೃತಪಟ್ಟಿದ್ದಾರೆ.
ಇದರೊಂದಿಗೆ ಹಾವೇರಿ ಜಿಲ್ಲೆಯಲ್ಲಿ ಕೊರೊನಾಗೆ ಬಲಿಯಾದ ಶಿಕ್ಷಕರ ಸಂಖ್ಯೆ 18ಕ್ಕೆ ಏರಿಕೆಯಾಗಿದೆ ಎಂದು ಡಿಡಿಪಿಐ ಅಂದಾನಪ್ಪ ವಡಗೇರಿ ತಿಳಿಸಿದ್ದಾರೆ.
ಗದಗ್ ಜಿಲ್ಲೆಯಲ್ಲಿ ನಾಲ್ವರು ಬಲಿ..!
ವಿದ್ಯಾಗಮ ಕಾರ್ಯಕ್ರಮ ಜಾರಿಯಾದ ಬಳಿಕ ಗದಗ್ ಜಿಲ್ಲೆಯಲ್ಲಿ ನಾಲ್ಕು ಶಿಕ್ಷಕರು ಕೊರೊನಾಗೆ ಬಲಿಯಾಗಿದ್ದಾರೆ.
ಗದಗ ತಾಲೂಕಿನ ಸೊರಟೂರು ಗ್ರಾಮದ ಶಿಕ್ಷಕ, ನರಗುಂದ ತಾಲೂಕಿನ ಉರ್ದು ಶಾಲೆಯ ಶಿಕ್ಷಕ, ಲಕ್ಷ್ಮೇಶ್ವರ ತಾಲೂಕಿನ ಓರ್ವ ಶಿಕ್ಷಕ ಹಾಗೂ ಗದಗ್‍ನ ಡಯಟ್‍ನ ಶಿಕ್ಷಕ ಸೇರಿದಂತೆ ನಾಲ್ಕು ಶಿಕ್ಷಕರು ಬಲಿಯಗಿದ್ದಾರೆ ಎಂದು ಗದಗ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಬಸವಲಿಂಗಪ್ಪ ಮಾಹಿತಿ ನೀಡಿದ್ದಾರೆ.

ವಿದ್ಯಾಗಮ ಕಾರ್ಯಕ್ರಮ ಜಾರಿಯಾಗುವ ಮುನ್ನ ಯಾರೂ ಸಾವನ್ನಪ್ಪಿರಲಿಲ್ಲ. ಜಿಲ್ಲೆಯಲ್ಲಿ 50 ಶಿಕ್ಷಕರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಅವರಲ್ಲಿ 40 ಶಿಕ್ಷಕರು ಕೊರೊನಾದಿಂದ ಗುಣಮುಖರಾಗಿದ್ದಾರೆ ಎಂದು ತಿಳಿಸಿದ್ದಾರೆ.








