ಬೆಳಗಾವಿ: ಜಿಲ್ಲೆಯ ಹುಕ್ಕೇರಿ ಪಟ್ಟಣ ಕಂಡು ಕೇಳರಿಯದ ಕುಂಭದ್ರೋಣ ಮಳೆಗೆ ನಿನ್ನೆ ಸಾಕ್ಷಿಯಾಗಿದೆ. ಹುಕ್ಕೇರಿ ಪಟ್ಟಣದ ಇತಿಹಾಸದಲ್ಲಿ ಇಲ್ಲಿನ ಜನರು ಎಂದೂ ಇಂತಹ ಮಳೆ ಹಾಗೂ ಪ್ರವಾಹವನ್ನು ನೋಡಿರಲಿಲ್ಲ.

ನಿನ್ನೆ ಸುರಿದ ಧಾರಾಕಾರ ಮಳೆಗೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿ ಭಾರಿ ಪ್ರವಾಹದ(Hukkari town rain) ಸ್ಥಿತಿ ಕಾಣಿಸಿಕೊಂಡಿತ್ತು. ಮಳೆಯ ಹೊಡೆತಕ್ಕೆ ರಸ್ತೆಗಳೆಲ್ಲಾ ನದಿಗಳಂತಾಗಿದ್ದವು. ರಣರಕ್ಕಸ ಮಳೆಗೆ ಹುಕ್ಕೇರಿ ಪಟ್ಟಣದಲ್ಲಿ ಜನಜೀವನ ಅಸ್ತವ್ಯಸ್ಥಗೊಂಡಿದೆ. ಹತ್ತಾರು ವಿದ್ಯುತ್ ಕಂಬಗಳು ಧರೆಗುರುಳಿದ್ದು, ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಪ್ರವಾಹದ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದ ಕಾರು, ಬೈಕ್ಗಳು ಹಳ್ಳ ಸೇರಿವೆ.

ನಿನ್ನೆ ಸುರಿದ ಭಾರಿ ಮಳೆಯಿಂದ ಹುಕ್ಕೇರಿಯ ಹಳೆ ಬಸ್ ನಿಲ್ದಾಣದ ರಸ್ತೆ ಸಂಪೂರ್ಣ ಜಲಾವೃತಗೊಂಡು ನೋಡ ನೋಡುತ್ತಿದ್ದಂತೆ ರಸ್ತೆ ಬದಿ ವ್ಯಾಪಾರ ಮಾಡುತ್ತಿದ್ದ ವೃದ್ಧರೊಬ್ಬರು ನೀರಲ್ಲಿ ಕೊಚ್ಚಿಕೊಂಡು ಹೋಗಿದ್ದರು. ಜತೆಗೆ ಯುವಕನೊಬ್ಬ ವಿದ್ಯುತ್ ಕಂಬ ಹಿಡಿದು ಆಶ್ರಯ ಪಡೆದಿದ್ದ. ಈ ಇಬ್ಬರನ್ನೂ ಸ್ಥಳೀಯರು ರಕ್ಷಣೆ ಮಾಡಿದ್ದು, ಹುಕ್ಕೇರಿ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಎರಡು ಗಂಟೆಗಳ ಬಿಟ್ಟು ಬಿಡದೆ ಸುರಿದ ಮಳೆಯ ಅಬ್ಬರಕ್ಕೆ ಹುಕ್ಕೇರಿ ಪಟ್ಟಣದ ರಸ್ತೆಗಳು ನದಿಗಳ ರೂಪ ಪಡೆದುಕೊಂಡಿದ್ದವು. ಸಂಕೇಶ್ವರ ಹುಕ್ಕೇರಿ ರಾಜ್ಯ ಹೆದ್ದಾರಿ ಬಂದ್ ಆಗಿತ್ತು. ಜನರ ಕಣ್ಣೆದುರೇ ಕಾರು, ಬೈಕ್ಗಳು ಕೊಚ್ಚಿಕೊಂಡು ಹೋಗುತ್ತಿದ್ದವು. ಸಾಯಿ ಮಂದಿರ ರಸ್ತೆಯಲ್ಲಿ ಹಗ್ಗದಿಂದ ಬೈಕ್ಗಳನ್ನ ಕಟ್ಟಿ ಹಾಕಿದ ದೃಷ್ಯ ಕೂಡ ಕಂಡು ಬಂದಿತ್ತು. ಹುಕ್ಕೇರಿ ಪಟ್ಟಣದ ಹಲವು ಮನೆಗಳಿಗೆ ನುಗ್ಗಿದ ಪರಿಣಾಮ ಇಡೀ ರಾತ್ರಿ ಜನ ಜಾಗರಣೆ ಮಾಡುವ ಸ್ಥಿತಿ ಬಂದಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








