ಥಾಲಾ ನಿಲಯಕ್ಕೆ ಸ್ವಾಗತ.. ನಾನು ಗೋಪಿಕೃಷ್ಣನ್.. ಇದು ಅಂತಿಂಥ ಮನೆಯಲ್ಲ.. ನನ್ನರಮನೆಯಲ್ಲಿ ಧೋನಿ..!
ಚೆನ್ನೈ ಸೂಪರ್ ಕಿಂಗ್ಸ್.. ಐಪಿಎಲ್ ನಲ್ಲಿ ಅಪಾರ ಸಂಖ್ಯೆಯ ಅಭಿಮಾನಿಗಳ ಬಳಗವನ್ನು ಹೊಂದಿರುವ ತಂಡ.
ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕಿಂತಲೂ ಅಲ್ಲಿ ಗಮನ ಸೆಳೆಯುತ್ತಿರುವುದು ನಾಯಕ ಮಹೇಂದ್ರ ಸಿಂಗ್ ಧೋನಿ.
ಟೀಮ್ ಇಂಡಿಯಾದ ಮಾಜಿ ನಾಯಕ, ರಾಂಚಿಯ ಹೀರೋ ಮಹೇಂದ್ರ ಸಿಂಗ್ ಧೋನಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ತವರು ಮನೆಯಂತಾಗಿದೆ.
ಸಿಎಸ್ ಕೆ ಅಭಿಮಾನಿಗಳು ಧೋನಿಯವರನ್ನು ಮನೆ ಮಗನಂತೆ ಆರಾಧಿಸುತ್ತಾರೆ.. ಪೂಜಿಸುತ್ತಾರೆ. ಅಷ್ಟೇ ಅಲ್ಲ, ಧೋನಿಯವರನ್ನು ಥಾಲಾ ಪ್ರೀತಿಯಿಂದ ಕರೆಯುತ್ತಾರೆ. ಅಷ್ಟೊಂದು ಅಭಿಮಾನವನ್ನು ಸಿಎಸ್ ಕೆ ಅಭಿಮಾನಿಗಳು ಧೋನಿಯ ಮೇಲಿಟ್ಟಿದ್ದಾರೆ.
ಕಳೆದ 12 ಐಪಿಎಲ್ಗಳ ಪೈಕಿ ಎರಡು ಐಪಿಎಲ್ ಹೊರತುಪಡಿಸಿ ಸಿಎಸ್ ಕೆ ತಂಡ ಅದ್ಭುತ ಪ್ರದರ್ಶನವನ್ನೇ ನೀಡಿದೆ. ತಂಡವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದ ಧೋನಿಯ ಮೇಲಿನ ಅಭಿಮಾನವನ್ನು ವರ್ಣಿಸಲು ಸಾಧ್ಯವಿಲ್ಲ.
ಆದ್ರೆ ಈ ಬಾರಿಯ ಐಪಿಎಲ್ ನಲ್ಲಿ ಚೆನ್ನೈ ತಂಡ ನಿರೀಕ್ಷಿತ ಮಟ್ಟದ ಪ್ರದರ್ಶನ ನೀಡಿರಲಿಲ್ಲ. ಹೀಗಾಗಿ ಕೆಲವೊಂದು ಟೀಕೆ, ಆಕ್ರೋಶಗಳು ಕೇಳಿಬಂದಿದ್ದವು. ಆದ್ರೂ ಇದೀಗ ಮತ್ತೆ ಗೆಲುವಿನ ಟ್ರ್ಯಾಕ್ಗೆ ಮರಳಿದೆ.
ಈ ನಡುವೆ ಚೆನ್ನೈ ನಲ್ಲಿ ಧೋನಿ ಅಭಿಮಾನಿಯೊಬ್ಬ ತನ್ನ ಮನೆಯನ್ನು ಪೂರ್ತಿಯಾಗಿ ಧೋನಿಮಯವಾಗಿಸಿಬಿಟ್ಟಿದ್ದಾರೆ.
ಗೋಪಿಕೃಷ್ಣನ್. ಇವರು ದುಬೈ ನಲ್ಲಿ ಕಳೆದ 12 ವರ್ಷಗಳಿಂದ ಕೆಲಸ ಮಾಡುತ್ತಿದ್ದರು. ಇದೀಗ ತನ್ನೂರಿಗೆ ಬಂದಿದ್ದಾರೆ.
ಧೋನಿ ಮೇಲಿನ ಅಪಾರ ಅಭಿಮಾನಕ್ಕೆ ತನ್ನ ಮನೆಯನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡ ಜೆರ್ಸಿ ಬಣ್ಣದಂತೆ ಶೃಂಗಾರ ಮಾಡಿದ್ದಾರೆ.
ತಮಿಳಿನಾಡಿನ ಕುಡಲೋರ್ ಜಿಲ್ಲೆಯ ಅರಂಗೂರ್ ಬಳಿ ಗೋಪಿ ಕೃಷ್ಣನ್ ಅವರ ಮನೆ ಇದೆ.
ತನ್ನ ಮನೆಗೆ ಹೋಮ್ ಆಫ್ ಧೋನಿ ಫ್ಯಾನ್ಸ್ ಅಂತ ಹೆಸರಿಟ್ಟಿದ್ದಾರೆ. ಹಳದಿ ಬಣ್ಣದಿಂದ ಕಂಗೊಳಿಸುತ್ತಿರುವ ಗೋಪಿಕೃಷ್ಣನ್ ಅವರ ಮನೆಯ ಗೋಡೆಗಳ ಮೇಲೆ ಧೋನಿಯ ಬ್ಯಾಟಿಂಗ್ ಶೈಲಿ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಲೋಗೋ ಚಿತ್ರಗಳು ರಾರಾಜಿಸುತ್ತಿವೆ.
ಸುಮಾರು ವರ್ಷಗಳ ಹಿಂದೆಯೇ ಯೋಚನೆ ಮಾಡುತ್ತಿದ್ದೆ. ನನ್ನ ಮನೆಯನ್ನು ಧೋನಿಮಯವಾಗಿರಿಸಬೇಕು ಎಂದು. ಈ ಬಾರಿ ಸಿಎಸ್ ಕೆ ತಂಡ ನಿರೀಕ್ಷಿತ ಮಟ್ಟದ ಪ್ರದರ್ಶನ ನೀಡುತ್ತಿಲ್ಲ. ಹೀಗಾಗಿ ತುಂಬಾ ಟೀಕೆಗಳು ಕೇಳಿಬರುತ್ತಿವೆ. ಆದ್ರೆ ನಾನು ಟೀಕೆಗಳನ್ನು ಸಹಿಸಿಕೊಳ್ಳುವುದಿಲ್ಲ. ನನ್ನ ಕೆಲವು ಗೆಳೆಯರು ಥಾಲಾ ಅವರ ಸಾಮಥ್ರ್ಯದ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಅವರಿಗೆಲ್ಲಾ ನಾನು ಉತ್ತರ ಕೊಟ್ಟು ಬಾಯಿಮುಚ್ಚಿಸಿದ್ದೇನೆ ಅಂತ ಹೇಳ್ತಾರೆ ಗೋಪಿಕೃಷ್ಣನ್.
ಜೀವನದಲ್ಲಿ ಸೋಲು ಗೆಲುವು ಸಾಮಾನ್ಯ. ಹಾಗಂತ ನಾವು ಟೀಕೆ ಮಾಡುವುದು ಸರಿಯಲ್ಲ. ಕೆಲವು ಕೆಟ್ಟ ಪಂದ್ಯಗಳಿಂದ ವ್ಯಕ್ತಿಯನ್ನು ಹೀಯಾಳಿಸುವುದು ಸರಿಯಲ್ಲ. ಥಾಲಾ ನನಗೆ ಥಾಲಾನೆ ಅಂತ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದಾರೆ ಗೋಪಿಕೃಷ್ಣನ್.
ಥಾಲಾ ಏನು ಎಂಬುದನ್ನು ತೋರಿಸಬೇಕು ಅಂತ ಮನದಲ್ಲೇ ಯೋಚನೆ ಮಾಡುತ್ತಿದ್ದೆ. ಆಗ ಹೊಳೆದಿದ್ದೆ. ಮನೆಯನ್ನು ಧೋನಿಮಯವಾಗಿಸಬೇಕು ಎಂಬುದು. ನನ್ನ ಮನೆ ಪಕ್ಕಾ ಸಿಎಸ್ಕೆ ಫ್ಯಾನ್ಸ್ ಥರಾ ಆಗಿರಬೇಕು. ಇದಕ್ಕಾಗಿ ಪೈಂಟರ್ಸ್ ಮತ್ತು ಕಲಾವಿದರನ್ನು ಭೇಟಿ ಕೂಡ ಮಾಡಿದ್ದೆ. ನನ್ನ ಮನೆಗೆ ನಿಪ್ಪೋನ್ ಪೇಂಟ್ ಬಳಕೆ ಮಾಡಿಕೊಂಡಿದ್ದೇನೆ. ಯಾಕಂದ್ರೆ ನಿಪ್ಪೊನ್ ಕಂಪೆನಿಯು ಸಿಎಸ್ ಕೆ ತಂಡಕ್ಕೆ ಪ್ರಾಯೋಜಕತ್ವವನ್ನು ನೀಡಿದೆ. ಒಟ್ಟಾರೆ ಮನೆ ಪೇಟಿಂಗ್ ಮಾಡಲು ಸುಮಾರು 1.5 ಲಕ್ಷ ರೂಪಾಯಿ ಖರ್ಚು ಮಾಡಿದ್ದೇನೆ. ನನ್ನ ಮನೆಯವರು ಎಲ್ಲಾ ರೀತಿಯ ಸಹಕಾರವನ್ನು ನೀಡಿದ್ದಾರೆ. ನನ್ನ ತಂದೆಯಂತೂ
ನಿನಗೆ ಇಷ್ಟಬಂದ ಹಾಗೇ ಮಾಡು ಎಂದು ಹೇಳಿದ್ರು ಅಂತ ಗೋಪಿಕೃಷ್ಣನ್ ಅವರು ಹೇಳುತ್ತಾರೆ.
ಇನ್ನು ತನ್ನ ಮನೆಯ ಗೋಡೆಯ ಮೇಲೆ ಧೋನಿ ಚಿತ್ರ ಮತ್ತು ಸಿಎಸ್ ಕೆ ತಂಡದ ಲೋಗೋ ಚಿತ್ರವನ್ನು ಬಿಡಿಸಿದ್ದು ಪೊನ್ನು ಸೆಲ್ವರಸು. ಸೆಲ್ವರಸು ಕೇವಲ ಮೂರು ದಿನಗಳಲ್ಲಿ ತನ್ನ ಕೆಲಸವನ್ನು ಮುಗಿಸಿದ್ದಾರೆ. ಇದಕ್ಕಾಗಿ ನಾನು ಹೆಚ್ಚಿನ ಹಣವನ್ನು ಕೂಡ ಪಡೆದುಕೊಂಡಿಲ್ಲ. ಗೋಪಿ ನನ್ನ ಗೆಳೆಯ. ಜೊತೆಗೆ ಧೋನಿ ಮತ್ತು ಸಿಎಸ್ ಕೆ ಅಭಿಮಾನದಿಂದ ಈ ಕೆಲಸವನ್ನು ಮಾಡಿದ್ದೇನೆ. ಈಗ ಎಲ್ಲಾ ಕಡೆಯಿಂದ ಕರೆಗಳು ಬರುತ್ತಿವೆ. ಸರ್ಕಾರಿ ಶಾಲೆಯ ಡ್ರಾಯಿಂಗ್ ಶಿಕ್ಷಕರಾಗಿರುವ ಸೆಲ್ವರಸು ಅವರಿಗೂ ಈಗ ಅಭಿಮಾನಿಗಳಾಗಿದ್ದಾರೆ.
ಈಗ ಗೋಪಿಕೃಷ್ಣನ್ ಅವರ ಮನೆಯನ್ನು ನೋಡಲು ಪ್ರತಿ ದಿನ 500ಕ್ಕೂ ಹೆಚ್ಚು ಮಂದಿ ಆಗಮಿಸುತ್ತಿದ್ದಾರೆ. ಜೊತೆಗೆ ಸೆಲ್ಫಿ ಕೂಡ ತೆಗೆದುಕೊಳ್ಳುತ್ತಿದ್ದಾರೆ.
ನಾನು ದುಬೈನಲ್ಲಿ ಇರುತ್ತಿದ್ರೆ ಸಿಎಸ್ ಕೆ ಪಂದ್ಯವನ್ನು ನೋಡಬಹುದಿತ್ತು. ಆದ್ರೆ ಸಿಎಸ್ ಕೆ ಪಂದ್ಯಗಳನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಗೋಪಿಕೃಷ್ಣನ್ ಬೇಸರದಿಂದ ಹೇಳಿಕೊಳ್ಳುತ್ತಿದ್ದಾರೆ.
ಒಟ್ಟಿನಲ್ಲಿ ಗೋಪಿಕೃಷ್ಣನ್ ಅವರು ಥಾಲಾ ಧೀನಿಯ ಮೇಲೆ ಟೀಕೆ ಮಾಡಿದವರಿಗೆ ತನ್ನ ಅಭಿಮಾನದ ಮೂಲಕ ತಕ್ಕ ಉತ್ತರವನ್ನು ನೀಡಿದ್ದಾರೆ.
ಅದೇ ರೀತಿ ಧೋನಿ ಈ ಬಾರಿಯ ಐಪಿಎಲ್ ನಲ್ಲೂ ಪ್ರಶಸ್ತಿ ಗೆದ್ದೆ ಗೆಲ್ಲುತ್ತಾರೆ ಅನ್ನೋ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.








