ಬೆಂಗಳೂರು: ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು ಇಂದು ಸದನದಲ್ಲಿ ಭಾವುಕರಾದ ಘಟನೆ ನಡೆಯಿತು. ಕೋಲಾರ ಜಿಲ್ಲೆಗೆ ಸಿದ್ದರಾಮಯ್ಯ ಸರ್ಕಾರ ಕೆ.ಸಿ ವ್ಯಾಲಿ ಮೂಲಕ ನೀರು ಹರಿಸಿತ್ತು. ಈ ವಿಚಾರವಾಗಿ ಸದನದಲ್ಲಿ ರಮೇಶ್ ಕುಮಾರ್ ಭಾವನಾತ್ಮಕವಾಗಿ ಮಾತನಾಡಿದರು. ಈ ಹಿಂದೆ ಕೆ.ಸಿ.ವ್ಯಾಲಿ ಮೂಲಕ ಕೋಲಾರ ಜಿಲ್ಲೆಗೆ ನೀರು ಬಂದಾಗ ನಾನು ಕಣ್ಣೀರು ಹಾಕಿದ್ದೆ. ಆದ್ರೆ ದಿನ ಕಳೆದಂತೆ ಕೆ.ಸಿ.ವ್ಯಾಲಿಯ ನೀರು ಜಿಲ್ಲೆಗೆ ದೊರಕುತ್ತಿಲ್ಲ. ಇದರ ಬಗ್ಗೆ ನನಗೆ ಮಾತನಾಡಲು ಸಾಧ್ಯವಿಲ್ಲ. ನನ್ನ ಆಪ್ತ, ನನ್ನ ಚಿರಂಜೀವಿ ಕೃಷ್ಣಬೈರೇಗೌಡ ಮಾತಾಡ್ತಾರೆ ಅಂತ ರಮೇಶ್ ಕುಮಾರ್ ಭಾವುಕರಾದ್ರು.
ಬಳಿಕ ರಮೇಶ್ ಕುಮಾರ್ ಮಾತಿನಂತೆ ಸದನದಲ್ಲಿ ಎದ್ದು ನಿಂತ ಕೃಷ್ಣಬೈರೇಗೌಡ ಅವರು ಕೆ.ಸಿ.ವ್ಯಾಲಿಯ ಸಮಗ್ರ ಮಾಹಿತಿಯನ್ನು ಸಚಿವರ ಗಮನಕ್ಕೆ ತಂದರು. ಇದೇ ವೇಳೆ ತಾವು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ಮಾಡಿದ ಕೆಲವು ಕೆಲಸಗಳನ್ನು ನೆನಪಿಸಿಕೊಂಡರು. ಇನ್ನು ಕೆ.ಸಿ.ವ್ಯಾಲಿ ಬಗ್ಗೆ ನಿರರ್ಗಳವಾಗಿ ಮಾತನಾಡಿದ ಕೃಷ್ಣಬೈರೇಗೌಡ ಅವರು ಸದನದ ಗಮನ ಸೆಳೆದರು. ಈ ವೇಳೆ ಇವರ ವಾದಕ್ಕೆ ಶಾಸಕರಾದ ಮಾಲೂರಿನ ನಂಜೇಗೌಡ, ಬಂಗಾರಪೇಟೆಯ ನಾರಾಯಣಸ್ವಾಮಿ, ಕೋಲಾರದ ಶ್ರೀನಿವಾಸಗೌಡ, ಕೆಜಿಎಫ್‌ನ ರೂಪ ಶಶಿಧರ್ ದನಿಗೂಡಿಸಿದರು.








