ಕೊರೊನಾ ಎಂಬ ಮಹಾಮಾರಿ ಭೀತಿಗೆ ರಾಜ್ಯದಲ್ಲಿ ಪಬ್, ನೈಟ್ ಕ್ಲಬ್, ಸಿನಿಮಾ ಥಿಯೇಟರ್, ಮಾಲ್ ಒಂದು ವಾರಗಳ ಕಾಲ ಬಂದ್ ಮಾಡಲಾಗಿತ್ತು. ಆದರೂ ಕೊರೊನಾ ವೈರಸ್ ಹರುಡುವಿಕೆಯ ಪ್ರಮಾಣ ಕಡಿಮೆ ಆಗಲಿಲ್ಲ. ಆದ್ದರಿಂದ ರಾಜ್ಯದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರು ಇಂದು ತುರ್ತು ಸಚಿವ ಸಂಪುಟ ಕರೆದಿದ್ದರು.
ಸಚಿವ ಸಂಪುಟದಲ್ಲಿ ಕೊರೊನಾ ವೈರಸ್ ತಡೆಗಟ್ಟುವ ಬಗ್ಗೆ ಚರ್ಚೆ ಮಾಡಲಾಗಿದೆ. ಪ್ರಸ್ತುತ ಪಬ್, ನೈಟ್ ಕ್ಲಬ್, ಸಿನಿಮಾ ಥಿಯೇಟರ್, ಮಾಲ್ ಬಂದ್ ಇರುವುದನ್ನು ಮಾರ್ಚ್ 31 ರವರೆಗೂ ಮುಂದುವರೆಸಲು ಸಚಿವ ಸಂಪುಟದಲ್ಲಿ ತೀರ್ಮಾನಿಸಲಾಗಿದೆ. ಜೊತೆಗೆ ಕೊರೊನಾ ತುರ್ತು ಚಿಕಿತ್ಸೆಗಾಗಿ 200 ಕೋಟಿ ಹಣವನ್ನು ಮೀಸಲು ಇಡಲಾಗಿದೆ. ಕೊರೊನಾ ವೈರಸ್ ಬಗ್ಗೆ ಮಾಹಿತಿ ಪಡೆಯಲು 4 ಟಾಸ್ಕ್ ಪೋರ್ಸ್ ಗಳನ್ನು ರಚನೆ ಮಾಡಲಾಗಿದೆ. ಇದರ ಜವಬ್ದಾರಿಯನ್ನು ಸಚಿವ ಬಸವರಾಜ ಬೊಮ್ಮಾಯಿ, ಅಶ್ವಥ್ ನಾರಾಯಣ ರೆಡ್ಡಿ, ಕೆ ಸುಧಾಕರ್, ಶ್ರೀರಾಮಲು ಅವರಿಗೆ ವಹಿಸಿಲಾಗಿದೆ. ಈ ಸಚಿವರು ಪ್ರತಿದಿನ ಕೊರೊನಾ ವೈರಸ್ ಬಗ್ಗೆ ಮಾಹಿತಿ ಪಡೆಯಲಿದ್ದಾರೆ. ಜೊತೆಗೆ ದಿನನಿತ್ಯ ಬೆಳಿಗ್ಗೆ ಮತ್ತು ಸಂಜೆ ಹೊತ್ತಿಗೆ ಬುಲೆಟಿನ್ ಬಿಡುಗಡೆ ಮಾಡುತ್ತಾರೆ.
ಸಚಿವ ಸಂಪುಟದ ಮತ್ತೊಂದು ಮಹತ್ವದ ತೀರ್ಮಾನ ಎಂದರೆ ಬೇರೆ ರಾಜ್ಯಗಳಿಂದ ಮತ್ತು ದೇಶಗಳಿಂದ ಬರುವ ಜನರನ್ನು ಪ್ರತ್ಯೇಕವಾಗಿ ಇಡಲಾಗುತ್ತದೆ. ಪ್ರತ್ಯೇಕವಾಗಿ ಇಡಲು ವಿಮಾನ ನಿಲ್ದಾಣದ ಸುತ್ತಾ ಮುತ್ತಾ ಇರುವ ಸರ್ಕಾರಿ ಕಾಲೇಜು, ಖಾಸಗೀ ಹೋಟೆಲ್, ರೆಸಾರ್ಟ್ ಗಳನ್ನು ಬಳಸಿಕೊಳ್ಳಲಾಗುತ್ತದೆ. ವಿದೇಶ ದಿಂದ ಬರುವ ಪ್ರಯಾಣಿಕರನ್ನು 14 ದಿನ ಕ್ವಾರಂಟೈನ್ ನಲ್ಲಿ ಇಡಲಾಗುತ್ತದೆ. ಅಲ್ಲದೆ ಅವರ ಬಲಗೈಗೆ ಸೀಲ್ ಹಾಕಲಾಗುತ್ತದೆ. ವಿದೇಶದಿಂದ ಬಂದವರು 15 ದಿನ ಯಾರನ್ನೂ ಸಂಪರ್ಕ ಮಾಡುವಂತಿಲ್ಲ.
ಕ್ವಾರಂಟೈನ್ ನಲ್ಲಿರುವ ವ್ಯಕ್ತಿಗಳು ಮನೆಯಿಂದ ಹೊರ ಬಂದು ಬೇರೆಯವರನ್ನು ಸಂಪರ್ಕ ಮಾಡಿದರೇ ಗೊತ್ತಾಗುವಂತೆ ತಂತ್ರಜ್ಞಾನ ಬಳಸಿಕೊಳ್ಳಲಾಗುತ್ತಿದೆ. ಇದರಿಂದ ಕ್ವಾರಂಟೈನ್ ನಲ್ಲಿರುವ ವ್ಯಕ್ತಿಗಳ ಪೋನ್ ಟ್ರ್ಯಾಕ್ ಡೌನ್ ಆಗಿ ಸರ್ಕಾರಕ್ಕೆ ತಿಳಿಯುತ್ತದೆ ಎಂದು ವೈದ್ಯಕೀಯ ಸಚಿವ ಡಾ. ಕೆ ಸುಧಾಕರ್ ತಿಳಿಸಿದ್ದಾರೆ.








