ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಚಂಡೀಗಢದ ಮಹಿಳೆಯೊಬ್ಬರಲ್ಲಿ ವೈರಸ್ ದೃಢಪಟ್ಟಿದೆ. ಇದರಿಂದ ದೇಶದಾದ್ಯಂತ ಸೋಂಕಿತರ ಸಂಖ್ಯೆ 170ಕ್ಕೆ ಏರಿಕೆಯಾಗಿದೆ. ಚಂಡೀಗಢ ಮೂಲಕ 23 ವರ್ಷದ ಮಹಿಳೆಯಲ್ಲಿ ವೈರಾಣು ದೃಢಪಟ್ಟಿದ್ದು,ಈಕೆ ಇತ್ತೀಚೆಗಷ್ಟೇ ಬ್ರಿಟನ್ ನಿಂದ ಭಾರತಕ್ಕೆ ವಾಪಸ್ಸಾಗಿದ್ದರು ಎಂದು ತಿಳಿದುಬಂದಿದೆ.
ಇನ್ನು ನಿನ್ನೆಯಷ್ಟೇ ದೇಶದ ವಿವಿಧ ರಾಜ್ಯಗಳಲ್ಲಿ ಹೊಸದಾಗಿ 23 ಮಂದಿಯಲ್ಲಿ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಈವರೆಗೂ ಭಾರತದಲ್ಲಿ ವೈರಸ್’ಗೆ ಮೂವರು ಸಾವನ್ನಪ್ಪಿದ್ದಾರೆ. ಸುದೈವವಶಾತ್ 14 ಜನರು ಗುಣಮುಖರಾಗಿ ಮನೆಗೆ ಮರಳಿದ್ದಾರೆ.