ಕೆಪಿಸಿಸಿ ಅಧ್ಯಕ್ಷರಾಗಿ ನೇಮಕವಾಗಿರುವ ಡಿ.ಕೆ ಶಿವಕುಮಾರ್ ಅವರು ಈಗಾಗಲೇ ಪಕ್ಷ ಸಂಘಟಿಸುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಪಣ ತೊಟ್ಟಿರುವ ಟ್ರಬಲ್ ಶೂಟರ್, ಈಗಿನಿಂದಲೇ ರಣತಂತ್ರಗಳನ್ನು ರೂಪಿಸುತ್ತಿದ್ದಾರೆ. ಅದರಲ್ಲೂ ಮೈತ್ರಿ ಸರ್ಕಾರವಿದ್ದಾಗ ಪಕ್ಷಕ್ಕೆ ಕೈ ಕೊಟ್ಟು ಕಮಲ ಹಿಡಿದವರ ವಿರುದ್ಧ ಕಾಂಗ್ರೆಸ್ ಕಟ್ಟಪ್ಪ ಸಮರ ಸಾರಿರುವ ಸೂಚನೆಗಳನ್ನು ನೀಡಿದ್ದಾರೆ. ಇದಕ್ಕೆ ಪುಷ್ಠಿವೆಂಬಂತೆ ಮುನಿರತ್ನ ಪ್ರತಿನಿಧಿಸುತ್ತಿದ್ದ ಆರ್ ಆರ್ ಕ್ಷೇತ್ರಕ್ಕೆ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಡಿ.ಕೆ ಶಿವಕುಮಾರ್ ಪ್ಲಾನ್ ಮಾಡಿಕೊಂಡಿದ್ದು, ವಿಜಯನಗರ ಶಾಸಕ ಎಂ. ಕೃಷ್ಣಪ್ಪ ಅವರ ಪುತ್ರ ಪ್ರಿಯಾಕೃಷ್ಣರನ್ನ ರಾಜರಾಜೇಶ್ವರಿ ನಗರದಲ್ಲಿ ಕಣಕ್ಕಿಳಿಸಲು ಟ್ರಬಲ್ ಶೂಟರ್ ಚಿಂತಿಸಿದ್ದಾರಂತೆ.
ಡಿ.ಕೆ ಶಿವಕುಮಾರ್ ಅವರು ಕೆಪಿಸಿಸಿ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಸಂದರ್ಭದಲ್ಲಿ ಅಭಿನಂದಿಸಲು ಬಂದಿದ್ದ ವೇಳೆ ಎಂ. ಕೃಷ್ಣಪ್ಪ ಹಾಗೂ ಪ್ರಿಯಾ ಕೃಷ್ಣ ಜೊತೆ ಈ ಬಗ್ಗೆ ಚರ್ಚೆ ನಡೆದಿರೋದು ಪಕ್ಷದ ಮೂಲಗಳಿಂದ ಗೊತ್ತಾಗಿದೆ. ಡಿಕೆಶಿ ಅವರು ಪ್ರಿಯಾಕೃಷ್ಣಾ ಜೊತೆ ಈ ಬಗ್ಗೆ ಪ್ರತ್ಯೇಕವಾಗಿ ಮಾತನಾಡಿದ್ದು, ಪಕ್ಷದಲ್ಲಿ ‘ನೀನೊಬ್ಬ ಯೂಥ್ ಐಕಾನ್’. ಕಳೆದ ಬಾರಿ ಚುನಾವಣೆಯಲ್ಲಿ ಗೋವಿಂದರಾಜನಗರದಲ್ಲಿ ಅನುಭವಿಸಿದ ಸೋಲನ್ನ ಕೆಟ್ಟ ಕನಸು ಅಂತಾ ಮರೆತು ಬಿಡು. ಮುನಿರತ್ನ ನಮಗೆ ಮಾಡಿರುವ ಆನ್ಯಾಯವನ್ನು ಜನರ ಮುಂದೆ ತಿಳಿಸೋಣ. ಕ್ಷೇತ್ರದಲ್ಲಿ ಪಕ್ಷ ಸಂಘಟಿಸೋಣ. ನೀನು ತಾಯಿ ರಾಜರಾಜೇಶ್ವರಿ ಆಶೀರ್ವಾದದಿಂದ ವಿಧಾನಸಭೆಗೆ ಆಯ್ಕೆಯಾಗಿ ಬಂದೇ ಬರುತ್ತೀಯಾ ಎಂಬ ವಿಶ್ವಾಸ ನನಗಿದೆ. ನೀನು ಕ್ಷೇತ್ರದಲ್ಲಿ ಕೆಲಸ ಶುರು ಮಾಡು, ಬಾಕಿಯದ್ದನ್ನು ನನಗೆ ಬಿಡು ಎಂದಿದ್ದಾರಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್.
ಒಟ್ಟಾರೆ ಮುನಿರತ್ನರಿಗೆ ಪಾಠ ಕಲಿಸಲು ಟ್ರಬಲ್ ಶೂಟರ್ ರೂಪಿಸಿರುವ ರಣತಂತ್ರ ವರ್ಕೌಟ್ ಆಗುತ್ತಾ ಇಲ್ವಾ ಅನ್ನೋದು ಪ್ರಿಯಾಕೃಷ್ಣ ತೀರ್ಮಾನದ ಮೇಲೆ ನಿಂತಿದೆ.









