ನೀವು ಲವ್ ಮಾಡುತ್ತಿದ್ದೀರಾ ? ನಿಮ್ಮ ಪ್ರಿಯತಮೆ ಅಥವಾ ಪ್ರಿಯಕರ ಬೇರೆ ಕುಲಕ್ಕೆ ಸೇರಿದ್ದರೆ ಈ ಸ್ಟೋರಿ ಒಮ್ಮೆ ನೋಡಲೇ ಬೇಕು. ಹೌದು ರಾಜ್ಯ ಸರ್ಕಾರ ಸಪ್ತಪದಿ ಯೋಜನೆಯಡಿ ಮದುವೆ ಮಾಡಿಸಲು ನಿರ್ಧರಿಸಿದೆ. ಸರ್ಕಾರ ಸಪ್ತಪದಿ ಎಂಬ ಮಹತ್ವದ ಯೋಜೆನೆಯನ್ನು ಜಾರಿ ಮಾಡಿದೆ. ಈ ಬಗ್ಗೆ ವಿಧಾನ ಪರಿಷತ್‌ನಲ್ಲಿ ಸ್ವಾರಸ್ಯಕರ ಚರ್ಚೆ ನಡೆದಿದೆ. ಸಪ್ತಪದಿ ಯೋಜನೆ ಅಡಿ ಮದುವೆಯಾಗುವಾಗ ಅಪ್ಪ ಅಮ್ಮನ ಒಪ್ಪಿಗೆ ಬೇಕೋ, ಬೇಡವೋ ಎಂದು ಇಂದು ಪರಿಷತ್‌ನಲ್ಲಿ ಚರ್ಚೆ ನಡೆಸಲಾಯಿತು.
ವಿಧಾನ ಪರಿಷತ್ ಸದಸ್ಯೆ ಹಾಗೂ ಹಿರಿಯ ನಟಿ ಜಯಮಾಲ ಇಂದು ಪರಿಷತ್‌ನಲ್ಲಿ ಸಪ್ತಪದಿ ಯೋಜನೆಯಲ್ಲಿ ಅಂತರ್ಜಾತಿ ವಿವಾಹಕ್ಕೆ ಅವಕಾಶ ಇದೆಯೇ ಎಂದು ಪ್ರಶ್ನೆಯೊಂದನ್ನು ಕೇಳಿದರು. ಇದಕ್ಕೆ ಉತ್ತರಿಸಿದ ವಿಧಾನ ಪರಿಷತ್‌ನ ಸಭಾ ನಾಯಕ ಕೋಟಾ ಶ್ರೀನಿವಾಸ್ ಪೂಜಾರಿ, ತಂದೆ ತಾಯಿ ಒಪ್ಪಿಗೆ ಇರುವ ಅಂತರ್ಜಾತಿ ವಿವಾಹಕ್ಕೆ ಅವಕಾಶ ಇದೆ ಎಂದು ಹೇಳಿದ್ದರು.
ಹುಡುಗಿಗೆ ಹದಿನೆಂಟು, ಹುಡುಗನಿಗೆ ಇಪ್ಪತ್ತೊಂದು ವರ್ಷ ಆಗಿ ಪರಸ್ಪರ ಒಪ್ಪಿಗೆ ಇದ್ದರೆ ಸಾಕು ಎಂಬ ಕಾನೂನು ಇದೆ. ಆ ರೀತಿ ಇರುವಾಗ ತಂದೆ ತಾಯಿ ಒಪ್ಪಿಗೆ ಯಾಕೆ..? ಇದು ಕಾನೂನಿನ ಉಲ್ಲಂಘನೆ ಅಲ್ಲವೇ ಎಂದು ಕಾಂಗ್ರೆಸ್ ಸದಸ್ಯರು ಪ್ರಶ್ನಿಸಿದರು. ಸರ್ಕಾರವೇ ನಡೆಸುತ್ತಿರುವ ಸಾಮೂಹಿಕ ವಿವಾಹದಲ್ಲಿ ಕಾನೂನು ಉಲ್ಲಂಘನೆ ಮಾಡಿದಂತಾಗುತ್ತದೆ ಎಂದು ವಾದಿಸಿದರು. ಈ ಬಗ್ಗೆ ಸದನದಲ್ಲಿ ವಾದ ವಿವಾದ ನಡೆಯಿತು. ಅಂತಿಮವಾಗಿ ಎಲ್ಲರ ಸಲಹೆಯನ್ನೂ ಪರಿಶೀಲಿಸಲಾಗುವುದು ಎಂದು ಕೋಟಾ ಶ್ರೀನಿವಾಸ್ ಪೂಜಾರಿ ಹೇಳಿದ್ದರು.