ಕೇಂದ್ರದ ಆರೋಗ್ಯ ಖಾತೆಯ ರಾಜ್ಯ ಸಚಿವ ಅಶ್ವಿನಿ ಕುಮಾರ್ ಚೌಬೆ, ದೇಶ ಕೊರೋನಾ ವೈರಸ್ ನಿಂದ ಆತಂಕಿತರಾಗಿರುವ ಸಮಯದಲ್ಲಿ ವಿವಾದಾತ್ಮಕ ಸಲಹೆ ನೀಡಿ ವಿವಾದವನ್ನು ಸೃಷ್ಟಿಸಿದ್ದಾರೆ.
ಕೊರೊನಾ ವೈರಸ್ ತಡೆಗೆ ಸಲಹೆ ನೀಡಿರುವ ಅವರು, ಕೊರೊನಾ ವೈರಸ್‍ನಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು 15 ನಿಮಿಷ ಬಿಸಿಲಿನಲ್ಲಿ ಕುಳಿತುಕೊಳ್ಳಿ. ಇದರಿಂದಾಗಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಕೊರೊನಾಗೆ ಸೂರ್ಯ ಸ್ನಾನವೇ ಮದ್ದು ಎಂದು ಸಲಹೆ ನೀಡಿದ್ದಾರೆ. ಬೆಳಗ್ಗೆ ಸುಮಾರು 11ರಿಂದ ಮಧ್ಯಾಹ್ನ 12ರ ಮಧ್ಯೆ ಬಿಸಿಲು ಜೋರಾಗಿರುತ್ತದೆ. ಆ ಸಮಯದ ಬಿಸಿಲಿನಲ್ಲಿ 15 ನಿಮಿಷಗಳ ಕಾಲ ಕುಳಿತುಕೊಂಡರೆ ವಿಟಮಿನ್ ಡಿ ಲೆವೆಲ್ ಹೆಚ್ಚುತ್ತದೆ. ಇದರಿಂದಾಗಿ ರೋಗ ನಿರೋಧಕ ಶಕ್ತಿ ಕೂಡ ಹೆಚ್ಚುತ್ತದೆ. ಈ ಮೂಲಕ ಕೊರೊನಾ ವೈರಸ್ ಕೊಲ್ಲಬಹುದಾಗಿದೆ ಎಂದು ಅಶ್ವಿನಿ ಕುಮಾರ್ ಚೌಬೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ದೇಶದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಿದ್ದು, ಇಲ್ಲಿಯವರೆಗೆ ಕೊರೊನಾಗೆ ಔಷಧಿಗಳನ್ನು ಕಂಡು ಹಿಡಿಯಲಾಗಿಲ್ಲ. ಈ ನಡುವೆ ಕೇಂದ್ರದ ಆರೋಗ್ಯ ಖಾತೆಯ ರಾಜ್ಯ ಸಚಿವರ ಈ ಹೇಳಿಕೆಯ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಹಿಂದೆ ಕ್ಯಾನ್ಸರ್ ಚಿಕಿತ್ಸೆಗೆ ಗೋಮೂತ್ರವನ್ನು ಬಳಸಲಾಗುತ್ತದೆ ಎಂದು ಹೇಳಿಕೆಯನ್ನು ಇವರು ನೀಡಿದ್ದರು.
ಇಲ್ಲಿಯವರೆಗೆ ಜಗತ್ತಿನಾದ್ಯಂತ 173 ರಾಷ್ಟ್ರಗಳಿಗೆ ಕೊರೊನಾ ಸೋಂಕು ಹಬ್ಬಿದ್ದು, ಸುಮಾರು 2,18,455 ಮಂದಿಗೆ ಸೋಂಕು ತಗುಲಿದೆ. ಅದರಲ್ಲಿ ಸುಮಾರು 85,664 ಮಂದಿ ಚಿಕಿತ್ಸೆ ಪಡೆದು ಕೊರೊನಾ ಸೋಂಕಿನಿಂದ ಚೇತರಿಸಿಕೊಂಡಿದ್ದರೆ, 8,938 ಮಂದಿ ಕೊರೊನಾ ಸೋಂಕಿನಿಂದ ಸಾವಿಗೀಡಾಗಿದ್ದಾರೆ. ಭಾರತದಲ್ಲಿ ಕೊರೊನಾ ವೈರಸ್‍ಗೆ ಈವರೆಗೆ 169 ಮಂದಿ ತುತ್ತಾಗಿದ್ದು, 14 ಮಂದಿ ಗುಣಮುಖರಾಗಿದ್ದಾರೆ. ಪ್ರಸ್ತುತ 152 ಮಂದಿ ಕೊರೊನಾದಿಂದ ಬಳಲುತ್ತಿದ್ದು 4 ಮಂದಿ ಮೃತಪಟ್ಟಿದ್ದಾರೆ. ಇಲ್ಲಿಯವರೆಗೆ ಕರ್ನಾಟಕದಲ್ಲಿ 14 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದರೆ, ನೆರೆಯ ಮಹಾರಾಷ್ಟ್ರದಲ್ಲಿ 45 ಮತ್ತು ಕೇರಳದಲ್ಲಿ 25 ಕೊರೊನಾ ಸೋಂಕಿತ ಪ್ರಕರಣ ವರದಿಯಾಗಿದೆ.
ಪ್ರಧಾನಿ ನರೇಂದ್ರ ಮೋದಿ ಕೊರೊನಾ ಬಗ್ಗೆ ಯಾವುದೇ ಸಚಿವರು, ಸಂಸದರು ಮತ್ತು ಬಿಜೆಪಿ ನಾಯಕರು ಎಚ್ಚರಿಕೆಯಿಂದ ಮಾತನಾಡ ಬೇಕು. ಕೊರೊನಾ ಸೋಂಕಿನ ಕುರಿತು ಅನಗತ್ಯವಾಗಿ ಟ್ವೀಟ್ ಮಾಡುವುದಾಗಲಿ, ಹೇಳಿಕೆ ನೀಡುವುದಾಗಲಿ ಮಾಡಬಾರದು ಎಂದು ಸೂಚಿಸಿದ್ದರು ಮತ್ತು ಕೊರೊನಾ ಸೋಂಕಿಗೆ ಇಲ್ಲಿಯವರೆಗೆ ಯಾವುದೇ ಔಷಧಿ ಕಂಡು ಹಿಡಿದಿಲ್ಲ ಎಂದು ಹೇಳಿದ್ದರು. ಅಲ್ಲದೆ ಕೇಂದ್ರ ಆರೋಗ್ಯ ಸಚಿವಾಲಯ ಕೊರೊನಾ ವೈರಸ್ ತಡೆಗೆ ಕೈಗೊಳ್ಳಬೇಕಾದ ಮುಂಜಾಗೃತಾ ಕ್ರಮಗಳ ಕುರಿತು ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ಎಲ್ಲಿಯೂ ಬಿಸಿಲಿನಲ್ಲಿ ಕುಳಿತುಕೊಳ್ಳುವುದರಿಂದ ಕೊರೊನಾ ವೈರಸ್ ತಡೆಯಬಹುದು ಎಂಬ ಸಲಹೆ ಇಲ್ಲದಿರುವುದರಿಂದ ಕೇಂದ್ರದ ಆರೋಗ್ಯ ಖಾತೆಯ ರಾಜ್ಯ ಸಚಿವರ ಹೇಳಿಕೆಗೆ ತೀವ್ರ ಖಂಡನೆ ವ್ಯಕ್ತವಾಗಿದೆ.
ಚಿಕ್ಕ ಮಕ್ಕಳಲ್ಲಿ ಮತ್ತು ವಯಸ್ಸಾದವರಲ್ಲಿ ಕೊರೋನಾ ಆತಂಕ ಸೃಷ್ಟಿಸಿರುವ ಈ ಸಂದರ್ಭದಲ್ಲಿ ಯಾವುದೇ ಸೂಕ್ತ ಮಾಹಿತಿ ಇಲ್ಲದೇ ಸೂರ್ಯ ಸ್ನಾನವೇ ಕೊರೊನಾಗೆ ಔಷಧಿ ಎಂದು ಹೇಳಿರುವುದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ








