ರಾಜ್ಯದಲ್ಲಿ ಯಾವುದೇ ಹೊಸ ಕೊರೊನಾ ವೈರಸ್ ಸೋಂಕು ಪ್ರಕರಣಗಳು ಶುಕ್ರವಾರ ವರದಿಯಾಗಿಲ್ಲ ಎಂದು ಸಚಿವ ಕೆ. ಸುಧಾಕರ್ ಹೇಳಿದ್ದಾರೆ. 
ವೈದ್ಯಕೀಯ ಶಿಕ್ಷಣ ಸಚಿವ ಡಾ| ಕೆ. ಸುಧಾಕರ್ ವಿಧಾನಸೌಧದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ ರಾಜ್ಯದಲ್ಲಿ ಯಾವುದೇ ಹೊಸ ಕೊರೊನಾ ವೈರಸ್ ಸೋಂಕು ಪ್ರಕರಣಗಳು ವರದಿಯಾಗಿಲ್ಲ ಎಂದು ಹೇಳಿದ್ದಾರೆ. ಆದರೆ ವಿದೇಶದಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಬಂದಿದ್ದು, 981ಜನರನ್ನು ಒಂದೇ ದಿನ ನಿಗಾದಲ್ಲಿ ಇರಿಸಲು ಗುರುತಿಸಲಾಗಿದ್ದು, ಅವರಲ್ಲಿ ಕೊರೊನಾ ರೋಗ ಲಕ್ಷಣಗಳಿರುವ 59 ಮಂದಿಯನ್ನು ಶುಕ್ರವಾರ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿಸಿದರು. ಕರ್ನಾಟಕದಲ್ಲಿ 15ಮಂದಿ ಕೊರೊನಾ ಸೋಂಕಿತರಲ್ಲಿ ಐದು ಮಂದಿ ಗುಣಮುಖರಾಗಿದ್ದರೆ, ನಾಲ್ಕು ಮಂದಿ ನಿಗಾ ಅವಧಿ ಮುಗಿಸಿ ರವಿವಾರ ಮತ್ತು ಬುಧವಾರ ಮನೆಗೆ ವಾಪಸಾಗಲಿದ್ದಾರೆ.
ಗ್ರೀಸ್ ದೇಶಕ್ಕೆ ಹನಿಮೂನ್ ಗೆಂದು ತೆರಳಿ ಭಾರತಕ್ಕೆ ಹಿಂತಿರುಗಿದ 26ವರ್ಷದ ಬೆಂಗಳೂರಿನ ಟೆಕ್ಕಿಗೆ ಮಾರ್ಚ್ 12ರಂದು ಕೊರೊನಾ ವೈರಸ್ ಸೋಂಕು ದೃಢಪಟ್ಟಿತ್ತು. ನಂತರ ಅವರು ಜಯನಗರ ಜನರಲ್ ಆಸ್ಪತ್ರೆಯಲ್ಲಿ ದಾಖಲಾಗಿ, ನಿರಂತರ 8 ದಿನಗಳ ಚಿಕಿತ್ಸೆಯಿಂದ ಸಂಪೂರ್ಣ ಗುಣಮುಖರಾಗಿದ್ದರು. ಇದೀಗ ಆಸ್ಪತ್ರೆಯಿಂದ ಅವರು ಡಿಸ್ಚಾರ್ಜ್ ಆಗಿದ್ದು, ಮುಂದಿನ 14 ದಿನಗಳ ಕಾಲ ಮನೆಯಲ್ಲಿ ಪ್ರತ್ಯೇಕವಾಗಿ ಇರುವಂತೆ ಸೂಚಿಸಲಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.









