ವಿಜಯಪುರ: ರಾಜ್ಯದಲ್ಲಿ ಕೊರೊನಾ ಭೀತಿಯ ನಡುವೆಯೇ ಶಾಲಾ-ಕಾಲೇಜು ಆರಂಭ ವಿಚಾರದಲ್ಲಿ ಕಳೆದ ಒಂದು ತಿಂಗಳಿಂದ ನಡೆಯುತ್ತಿರುವ ಚರ್ಚೆಗೆ ಇನ್ನೂ ಸ್ಪಷ್ಟರೂಪ ಸಿಕ್ಕಿಲ್ಲ.
ಕಳೆದ ತಿಂಗಳು ಮುಖ್ಯಮಂತ್ರಿ ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ತೀರ್ಮಾನದಂತೆ ನ.17ರಿಂದ ಪದವಿ ಹಾಗೂ ಸ್ನಾತಕೋತ್ತರ(ಪಿಜಿ) ತರಗತಿಗಳನ್ನು 8 ತಿಂಗಳ ಬಳಿಕ ಆರಂಭಿಸಲು ರಾಜ್ಯದ ಏಕೈಕ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ತೀರ್ಮಾನಿಸಿದೆ.

ಮಹಿಳಾ ವಿಶ್ವವಿದ್ಯಾಲಯ ವ್ಯಾಪ್ತಿಗೆ ಬರುವ ಪದವಿ, ಸ್ನಾತಕೋತ್ತರ ಕಾಲೇಜುಗಳಲ್ಲಿ ಎಲ್ಲಾ ತರಗತಿಗಳನ್ನು ಎಂದಿನಂತೆ ಆರಂಭಿಸಲಾಗುವುದು ಎಂದು ಹಂಗಾಮಿ ಕುಲಪತಿ ಡಾ.ಓಂಕಾರ ಕಾಕಡೆ ತಿಳಿಸಿದ್ದಾರೆ.
ಅಕ್ಕಮಹಾದೇವಿ ವಿವಿ ವ್ಯಾಪ್ತಿಗೆ ಬರುವ ಎಲ್ಲಾ ಕಾಲೇಜುಗಳು, ಮಂಡ್ಯ, ಸಿಂಧನೂರು, ಉಡುತಡಿ, ಮಹಿಳಾ ವಿವಿ ಕ್ಯಾಂಪಸ್ ಆರಂಭಗೊಳ್ಳಲಿವೆ. ಈ ಸಂಬಂಧ ಎಲ್ಲಾ ಕಾಲೇಜುಗಳ ಪ್ರಾಂಶುಪಾಲರಿಗೆ ಸೂಚನೆ ನೀಡಲಾಗಿದೆ. ಅತಿಥಿ ಉಪನ್ಯಾಸಕರ ನೇಮಕ ಮಾಡಿಕೊಳ್ಳಲು ಅಧಿಸೂಚನೆ ಹೊರಡಿಸಲಾಗಿದೆ. ತರಗತಿಗಳನ್ನು ಆರಂಭಿಸುವಾಗ ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಲಾಗಿದೆ. ವಿದ್ಯಾರ್ಥಿನಿಯರು ನ.17ರಿಂದ ತರಗತಿಗಳಿಗೆ ಹಾಜರಾಗುವಂತೆ ಮಾಹಿತಿ ನೀಡಲಾಗಿದೆ. ವಿದ್ಯಾರ್ಥಿನಿಯರು ಸ್ಯಾನಿಟೈಸರ್, ಮಾಸ್ಕ್ ಬಳಸುವುದನ್ನು ಕಡ್ಡಾಯ ಮಾಡಲಾಗಿದೆ ಎಂದು ಓಂಕಾರ ಕಾಕಡೆ ವಿವರ ನೀಡಿದ್ದಾರೆ.
ಶಾಲಾ-ಕಾಲೇಜು ಆರಂಭಕ್ಕೆ ಶಿಕ್ಷಣ ಇಲಾಖೆ ಯಡವಟ್ಟಿನ ಹೆಜ್ಜೆ ಇಡುತ್ತಲೇ ಇದೆ. ಯಡವಟ್ಟು ನಿರ್ಧಾರಗಳ ಬಗ್ಗೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಆದೇಶಗಳನ್ನು ವಾಪಸ್ ಪಡೆಯುತ್ತಿದೆ. ಒಂದು ಕಡೆ ಹೆಮ್ಮಾರಿ ಕೊರೊನಾ ಭೀತಿ, ಮತ್ತೊಂದೆಡೆ ಶಿಕ್ಷಣದಿಂದ ವಂಚಿತರಾಗುತ್ತಿರುವ ಮಕ್ಕಳು, ಈ ಗೊಂದಲದ ನಡುವೆ ಮಹಿಳಾ ವಿವಿ ತರಗತಿ ಆರಂಭಿಸುವ ದಿಟ್ಟ ನಿರ್ಧಾರ ತೆಗೆದುಕೊಂಡಿದೆ. ಮಹಿಳಾ ವಿವಿ ದಾರಿಯಲ್ಲೇ ಇನ್ನುಳಿದ ವಿಶ್ವವಿದ್ಯಾಲಯಗಳು ಹೆಜ್ಜೆ ಇಡುತ್ತವಾ ಎಂಬುದನ್ನು ಕಾದು ನೋಡಬೇಕಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








