ಕೋವಿಡ್-19 ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಎಸ್ ಎಸ್ ಎಲ್ ಸಿ ಪಬ್ಲಿಕ್ ಪರೀಕ್ಷೆಗಳನ್ನು ಮುಂದೂಡಲಾಗಿದೆ.
ಇಂದು ತಮ್ಮ ನಿವಾಸದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಬಿ ಎಸ್ ಯಡಿಯೂರಪ್ಪ ಕೋವಿಡ್-19 ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಎಸ್ ಎಸ್ ಎಲ್ ಸಿ ಪಬ್ಲಿಕ್ ಪರೀಕ್ಷೆಗಳನ್ನು ಮುಂದೂಡಲಾಗಿದೆ ಎಂದು ತಿಳಿಸಿದರು. ಧಾರವಾಡದಲ್ಲಿ ಒಂದು ಕೊರೋನಾ ವೈರಸ್ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 21ಕ್ಕೆ ಏರಿದೆ.
ಮಾರ್ಚ್ 27ರಿಂದ ಎಸ್ ಎಸ್ ಎಲ್ ಸಿ ಪಬ್ಲಿಕ್ ಪರೀಕ್ಷೆಗಳನ್ನು ನಿಗದಿಪಡಿಸಲಾಗಿತ್ತು ಆದರೆ ಕೋವಿಡ್-19 ಭೀತಿಯ ಹಿನ್ನೆಲೆಯಲ್ಲಿ ಪರೀಕ್ಷೆಗಳನ್ನು ಅನಿರ್ಧಿಷ್ಟಾವಧಿಗೆ ಮುಂದೂಡಲಾಗಿದೆ.
ಈಗಾಗಲೇ ದ್ವಿತೀಯ ಪಿಯುಸಿ ಪರೀಕ್ಷೆಗಳು ಆರಂಭವಾಗಿದ್ದು, ನಾಳೆ (ಮಾರ್ಚ್ 23) ರಂದು ಕೊನೆಯ ಪರೀಕ್ಷೆಗಳು ಎಂದಿನಂತೆ ನಡೆಯಲಿದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.








